ಸೋಮವಾರ, ಜುಲೈ 16, 2012

ಟಿಪ್ಪು Expressನಲ್ಲಿ ನಾನೊಂದಿನ....!!!!!

ಸುಮಾರು 2:30 ರ ಮಧ್ಯಾಹ್ನ ಪ್ಲಾಟ್ ಫಾರ್ಮನಲ್ಲಿ ಕೊಂಡ ನನ್ನ ಇಷ್ಟದ ಚಿತ್ರಾನ್ನದೊಂದಿಗೆ ನಾನು ಹತ್ತಬೇಕಾದ ಟಿಪ್ಪು express ರೈಲಿಗಾಗಿ ಹುಡುಕಾಡಿದೆ. ಹೊಟ್ಟೆ ಹಸಿವಿನಿಂದ ಬಳಲಿದ್ದರೂ, ಭಾರದ ಬ್ಯಾಗ್ ಹೊತ್ತಿದ್ದರೂ ಇದಾವುದೊಂದೂ ಗಣನೆಗೆ ಬಾರದೆ ನನ್ನಿಷ್ಟದ ಊರಿನ ಪಯಣದ ಸವಿ ನನ್ನನ್ನು ಆವರಿಸಿತ್ತು. ಸುಂದರ ಬೆಡಗಿಯರ ಸಂಚಾರಕ್ಕೆ ಆ ಪ್ಲಾಟ್ ಫಾರ್ಮ್ ಹಾಸು ಹಾಸಿತ್ತು. ಮಿತ ಸಂಭಾಷಣೆ ನೆರೆದ ಜನರಲ್ಲಿ ತುಂಬಿತ್ತು. ಗೊಂದಲಗಳಿಲ್ಲದೆ ಪರಿಶುದ್ದ ಮನದ ಜನ ಅವರೆನಿಸಿದರು. ಒಮ್ಮೆಗೆ ನನ್ನ ಗಮನ ಸೆಳೆದ ಆ ಪ್ಲಾಟ್ ಫಾರ್ಮ್ ನಾ ಹತ್ತಬೇಕಾದ ಟಿಪ್ಪು express ನದೇ ಎಂದು ಖಾತ್ರಿಯಾಯಿತು. ಎಷ್ಟೇ ಆಗಲಿ ಆ ಗುಣಗಳೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿಗರಿಗಲ್ಲದೆ ಮತ್ತಾರಿಗೆ ಇರಬೇಕು ಹೇಳಿ..!!!

ಪ್ರಯಾಣದ ವೇಳೆಯಲ್ಲಿ ತಮ್ಮ ಪಕ್ಕದ ಸೀಟ್ಗಳಲ್ಲಿ ಹುಡುಗಿಯರಿಗಾಗಿ ಹಾತೋರೆಯೋದು ಹುಡುಗರ ಸಹಜವಾದ ಅಪೇಕ್ಷೆ. ಇಷ್ಟು ದಿನಗಳಲ್ಲಿ ನನಗೆ ಎಂದಿಗೂ ಆ ಸೌಭಾಗ್ಯ..:) ಸಿಗದಿದ್ದರೂ, ಅದು ಹೇಗೋ ನಾನು ಕಾಯ್ದಿರಿಸಿದ್ದ ಸೀಟ್ನಲ್ಲಿ ಒಂದು ಅಂದದ ಹುಡುಗಿ ಕೂತಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ  ಎಂಬ ಹಳೆ ಗಾದೆಯಂತೆಯೇ ಆಯ್ತು ನೋಡಿ. ನಾನು  ಮೆಲು ಧ್ವನಿಯಲ್ಲಿ 'seat# 107'  ಎಂದೆ ಹುಡುಗಿ ಮೆಲ್ಲಗೆ ಪಕ್ಕಕ್ಕೆ ಸರಿದಳು. ನಾನಂತೂ ಬಹಳ ವಿನಯಪೂರ್ವಕವಾಗಿ ಜಾಗವನ್ನ ಅಲಂಕರಿಸಿದೆ. ಕುಟುಂಬ ಸಮೇತಳಾಗಿ ಪ್ರಯಾಣ ಅನ್ಸತ್ತೆ, ಆಕೆಯ ತಾತ ಅವಳೆದುರಿಗೆ ಕೂತಿದ್ದರು. ನಾನೇನೋ ಅವರ ಆಸ್ತಿ ಪತ್ರಕ್ಕೆ ಸಹಿ ಕೇಳಲು ಬಂದಿರುವನೇನೋ ಎಂಬತ್ತಿತ್ತು ಅವರ ನೋಟ. ಏನಾಯ್ತೋ ಗೊತ್ತಿಲ್ಲಾ ನಾನು wash room ಗೆ ಹೋಗಿ ಬರುವಷ್ಟರಲ್ಲಿ ತಾತ ಮೊಮ್ಮಗಳ ಜಾಗ ಅದಲು ಬದಲಾಗಿತ್ತು. ಎಷ್ಟಾದರೂ ಬಹಳ positive attitude ನವನಾದ ನಾನು ಅದನೆಲ್ಲಾ positive ಆಗೇ ತಗೊಂಡೆ. ಹೋಗ್ಲಿ ತಾತನ ಪರಿಚಯ ಮಾಡಿಕೊಳ್ಳುವ ಎಂದು ಎಲ್ಲಿಗೆ ಪಯಣ?.. ಏನು ಸಮಾಚಾರ ಇತ್ಯಾದಿ ಇತ್ಯಾದಿ ..ಎಲ್ಲಾ ಕೇಳಿದೆ. ಆದ್ರೆ ತಾತ ಮಾತ್ರ ಪರೀಕ್ಷೆಯಲ್ಲಿ ಬರೆಯುವ one word answer ನಂತೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವಕ್ಕಂತೂ ಮಿಲಿಟರಿಯಿಂದ ತಪ್ಪಿಸಿಕೊಂಡು ಬಂದವರಂತೆ ಹ್ಹಾ ...ಇಲ್ಲ.. ಅಷ್ಟೇ!!!!.

ನಾನು ಯಾಕೋ workout ಆಗ್ತಿಲ್ಲ ಎಂದು ಶಿವರಾಮ ಕಾರಂತರ 'ಹುಚ್ಚು ಮನಸಿನ ಹತ್ತು ಮುಖಗಳು' ಎಂಬ ಅವರ ಆತ್ಮಕಥನವನ್ನು ಓದಲು ಮುಂದುವರೆಸಿದೆ. ಕಾರಂತರಿಗಿದ್ದ ಅಭಿರುಚಿಗಳನ್ನು ಸ್ಥೂಲವಾಗಿ ಪರಿಚಯಿಸಿರುವ ಆ ಪುಸ್ತಕವನ್ನು ಓದೋದೇ ಒಂದು ಮಜಾ ಬಿಡಿ. ವೈವಿಧ್ಯಮಯವಾದ ಜೀವನ ನಡೆಸಬೇಕು ಎನ್ನುವವರಿಗೆ ಆ ಪುಸ್ತಕ ಒಂದು ಮಾರ್ಗದರ್ಶಿ.

ಪುಸ್ತಕ ಓದೋ ಭರದಲ್ಲಿ, ಆಗಾಗ್ಗೆ ಹುಡುಗಿಯ ನೋಟಗಳಲ್ಲಿ, ಕಣ್ಮನ ಸೆಳೆಯುವ ಭತ್ತದ ಗದ್ದೆಗಳಲ್ಲಿ, ಹಸಿರಿನಿಂದ ನಳನಳಿಸುತ್ತಿದ್ದ ಕಬ್ಬಿನ ಹೊಲಗಳಲ್ಲಿ, ಬೆಳ್ಳಕ್ಕಿ ಹಾರಟಗಳಲ್ಲಿ, ಕಾವೇರಿ, ಶಿಂಷಾ ಇನ್ನಿತರ ನದಿಗಳ ಹೊಳೆಗಳಲ್ಲಿ ಮುಳುಗಿಹೋಗಿದ್ದ ನನ್ನ ಮನಸ್ಸು, ಬುದ್ದಿಗೆ ಮದ್ದೂರು ಬಂದ್ದದ್ದೆ ಗೊತ್ತಾಗಲಿಲ್ಲ. ಮದ್ದೂರಿಗೆ ಬಂದೂ, ಮದ್ದೂರು ವಡೆ ಸವಿಯದಿದ್ದರೆ ಮನಸ್ಸು ಒಪ್ಪುವುದೇ?.. ಗರಿಗರಿಯಾದ ವಡೆ ತಿನ್ನೋದರಲ್ಲಿ ಮಗ್ನನಾದ ನನ್ನನ್ನು, ತಾತಪ್ಪ ಅವರ ಮೊಮ್ಮಗಳ ಬಾಯಿಂದಲೇ ಕಸಿದೆನೇನೋ ಎಂಬಂತೆ ನೋಡುತಿದ್ದರು.

ಒಂದು ಅಂದಾಜಿನ ಪ್ರಕಾರ ಮೈಸೂರು, ಮಂಡ್ಯ ಸುತ್ತಮುತ್ತಲಿನ ಲಕ್ಷಾಂತರ ಹೆಕ್ಟೇರ್ ಗಳಿಗೆ ಕೃಷ್ಣರಾಜಸಾಗರ ಆಣೆಕಟ್ಟು ನೀರುಣಿಸುತ್ತಿದೆ. ರೈತರು ಸಮೃದ್ಧವಾದ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವ ಸರ್. ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿ ಪ್ರತಿಬಾರಿ ಮೈಸೂರಿಗೆ ಹೋದಾಗ ನೆನಪಾಗುತ್ತದೆ. ಅವರ ಬುದ್ದಿವಂತಿಕೆ, ಕಾರ್ಯಧಕ್ಷತೆ, ದೂರದೃಷ್ಟಿಗಳನ್ನು ಅರ್ಥಮಾಡಿಕೊಳ್ಳಲು ತಿಣುಕಾಡುವ  ನನ್ನಂಥವನಿಗೆ  ಇಂಜಿನಿಯರ್ ಆಗಿ ನಾನು ಮಾಡುತ್ತಿರುವ ಕೆಲಸ ನೆನೆದು ನಾಚಿಕೆಯಾಯಿತು. ತಕ್ಷಣ ಏನೂ ತೋಚದೆ ಕೈಯಲ್ಲಿ ಉಳಿದಿದ್ದ ವಡೆಯನ್ನು ಬಾಯಿ ಚಪ್ಪರಿಸಿತು.

ಮೈಸೂರು ನಮ್ಮ ಕರ್ನಾಟಕದ ಹೆಮ್ಮೆ, ಸಂಸ್ಕೃತಿಯ ರಾಯಭಾರಿ ಸಂಪ್ರದಾಯಗಳ ಪ್ರತೀಕ. ಹಲವಾರು ಸುಂದರ ನದಿ, ಹೊಳೆ, ಬೆಟ್ಟಗಳಿಂದ, ವೈಭವೋಪೇತ ಅರಮನೆ, ದೇವಸ್ಥಾನ, ದತ್ತ ಕಾಡುಗಳಿಂದ, ವೈವಿಧ್ಯಮಯ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಿಂದ ಸುತ್ತುವರೆದ ನಾಡು. ಪ್ರತಿಬಾರಿ ಇಲ್ಲಿಗೆ ಬಂದಾಗಲೂ ಮನಸ್ಸಿಗೆ ಬೇರೆಯದೇ ಅನುಭವ ಶಾಂತಿ.
ಕರ್ನಾಟಕ, ಭಾರತ ಅಲ್ಲದೆ ಇಡೀ ವಿಶ್ವಕ್ಕೆ ದಿಗ್ಗಜರನ್ನು ಪರಿಚಯಿಸಿರುವ, ಪರಿಚಯಿಸುತ್ತಿರುವ ಈ ನೆಲ ನಿಜಾರ್ಥದಲ್ಲಿ ಪುಣ್ಯಭೂಮಿಯೇ  ಸರಿ!!!. ಸರಿಯಾಗಿ 5:16 ನಿಮಿಷಕ್ಕೆ ಟಿಪ್ಪು express ಈ ಪುಣ್ಯಭೂಮಿಗೆ ಬಂದು ತಲುಪಿತು. ತಾತಪ್ಪ ಮಾತ್ರ ನಾನೆಲ್ಲಿ ಅವರ ಮೊಮ್ಮಗಳನ್ನ ಅಪಹರಿಸುತ್ತೇನೋ ಎಂಬಂಥಹ ಆತಂಕಕಾರಿ ನೋಟವನ್ನೇ ಬೀರುತ್ತಿದ್ದರು!!!...