ಗುರುವಾರ, ಸೆಪ್ಟೆಂಬರ್ 6, 2012

ಸ್ವಾವಲಂಬಿ ಹಳ್ಳಿಗರ ನಿರ್ಮಾತೃ - ಶ್ರೀಕ್ಷೇತ್ರ ಧರ್ಮಸ್ಥಳ.

"ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ, ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ", ದಯವಿಟ್ಟು ಎಲ್ಲೋ ಕೇಳಿದ ಹಾಗಿದೆ ಅನ್ನಬೇಡಿ. ಇದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಕಾಣಿಕೆ ನೀಡಿದ, ಪ್ರೇಮಕವಿ ಎಂದೇ ರಾಜ್ಯಾಂದ್ಯಂತ ಹೆಸರುಗಳಿಸಿದ್ದ ಕೆ.ಎಸ್. ನರಸಿಂಹಸ್ವಾಮಿಯವರ ರಚನೆ.  ಇದು ಅವರು ಬರೆದಿದ್ದ "ಮೈಸೂರು ಮಲ್ಲಿಗೆ" ಕವನಸಂಕಲನದ ಒಂದು ಕವನ. ಮೈಸೂರು  ಮಲ್ಲಿಗೆ ಸಿನೆಮಾದಲ್ಲಿ ಈ ಕವನಸಂಕಲನದ ಸಾಕಷ್ಟು ಕವಿತೆಗಳನ್ನು ಬಳಸಿಕೊಳ್ಳಲಾಗಿತ್ತು. ನಮ್ಮ ಕನ್ನಡದ ಭಾವಗೀತ ಪ್ರಾಕಾರವನ್ನು ವಿಶಿಷ್ಟ ರೀತಿಯ ರಚನೆಗಳ ಮೂಲಕ ಶ್ರೀಮಂತಗೊಳಿಸಿದ ಕವಿ
ಕೆ.ಎಸ್.ನರಸಿಂಹಸ್ವಾಮಿಯವರು. ಅವರು ಮಾತ್ರ ಬಡವರಾಗೇ ವಿಧಿವಶರಾದದ್ದು, ಇತ್ತೀಚೆಗಷ್ಟೇ ಅಂತ್ಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಕ್ರಿಕೇಟ್ನಲ್ಲಿ ಸಚಿನ್ ಸತತವಾಗಿ 3 ಬಾರಿ ಬೌಲ್ಡ್ ಆದಷ್ಟೇ ನಿಜ.

ಹಲವು ದಶಕಗಳ ಹಿಂದೆ, ಬಳೆಗಾರ ಎಂದರೆ ಆತ ಕೆಲವು ಹಳ್ಳಿಗಳ, ಊರುಗಳ ಬಹಳ ಪರಿಚಯಿಸ್ಥ ವ್ಯಕ್ತಿ. ಒಂದು ಊರಿಗೆ ಹೇಗೆ ಪಟೇಲರು, ಶಾನುಭೋಗರು, ಅರ್ಚಕರು ಇರುತ್ತಾರೋ ಅದೇ ರೀತಿ ಬಳೆಗಾರನದೂ ಪ್ರಮುಖ ಸ್ಥಾನ. ಆತನ ಬರುವಿಕೆಗೆ ಊರಿನ ಹೆಣ್ಣುಮಕ್ಕಳ್ಳೆಲ್ಲಾ ಕಾಯುತ್ತಿದ್ದರು. ಆತ ಆ ಊರಿನ ಒಂದು ಮುಖ್ಯ ಭಾಗವೇ ಆಗಿರುತ್ತಿದ್ದ. ಇಂದಿನ ದಿನಗಳಲ್ಲಿ ಮನೆ ಮುಖ್ಯಸ್ಥರಿಗೆ ತಕ್ಕುದಾದ ಬೆಲೆ ಸಿಗುವುದು ಕಷ್ಟ ಅಂತಹುದರಲ್ಲಿ ಬೀದಿ ಅಲೆಯೋ ಬಳೆಗಾರನಿಗೆ ಸಿಗುವುದು ನಮ್ಮ ರಾಜಕಾರಣಿಗಳಿಂದ ಸ್ವಚ್ಚ ಆಡಳಿತ ಬಯಸಿದಷ್ಟೇ ಕಷ್ಟ.

ಇಂಥಾ ಒಬ್ಬ ಬಳೆಗಾರನನ್ನು, ನಾನು ಇತ್ತೀಚಿಗೆ ನಮ್ಮ ಮಾವ ತೀರಿಹೋದ ಕಾರಣ ಅವರ ಕೊನೆ ದರ್ಶನಕ್ಕೆಂದು ತುಮಕೂರಿನಿಂದ ಸುಮಾರು 80 ಕಿಮೀ ದೂರದಲ್ಲಿರುವ ಬುಕ್ಕಾಪಟ್ಟಣ ಎಂಬ ಹಳ್ಳಿಗೆ ಹೋಗುತ್ತಿರುವಾಗ ಭೇಟಿ ಮಾಡಿದೆ.

ಆಗ ತಾನೇ ಬಂದು ನಿಂತ ಬಸ್ಸನ್ನು ಎಲ್ಲರೂ ವ್ಯವಧಾನದಿಂದಲೇ ಹತ್ತಿದರು. ಹಳ್ಳಿಗರಾದರೂ ಅವರಲ್ಲಿ ಸಾಮಾನ್ಯ ಜ್ಞಾನ ಇತ್ತು. ಬೆಂಗಳೂರಿನಂತೆ ಬಸ್ ಬಂದ ತಕ್ಷಣ ಕುರಿಗಳಂತೆ ನುಗ್ಗಿ ಸೀಟನ್ನು ಆಕ್ರಮಿಸುವ ರೀತಿ ಖಂಡಿತ ಆಗ್ಲಿಲ್ಲ. ಕಿಟಕಿ ಪಕ್ಕ ಕುಳಿತಿದ್ದ ಬಳೆ ಮಾರುವಾತನ ಪಕ್ಕ ನಾನು ಹೋಗಿ ಕುಳಿತೆ. ಹಳ್ಳಿ ಬಸ್ ಎಂದರೆ ಕೇಳಬೇಕೆ ಹೊಸ ಹಾಡನ್ನೂ ತಾತನ ಕಾಲದ ಹಾಡು ಕೊರಗಿ ಕೊರಗಿ ಮೊಳಗುವಂತೆ, ಕಿವಿ ಕಿತ್ತು ಹೋಗುವಂತೆ ಹಾಕಿದ್ದ. ಅದರ ಜೊತೆ ಹಲವರ ಮೊಬೈಲ್ ಕೋರಸ್ನಂತೆ ತಮಿಗಿಷ್ಟ ಬಂದಂತೆ ಕಿರುಚುತ್ತಿದ್ದವು. ಅವರ ಮೊಬೈಲ್ ಫೋನ್ ಪ್ರದರ್ಶನ, ನಮ್ಮ ರಾಷ್ಟ್ರದ ಉದಾರೀಕರಣ ನೀತಿಯನ್ನು ಬಹಳ ಉದಾರವಾಗಿ ತಮ್ಮ ತಮ್ಮ ಉಡದಾರಕ್ಕೆ ಸಿಕ್ಕಿಸಿಕೊಂಡಂತೆ ನನಗನ್ನಿಸಿತು.  ಹೆಂಗಸರಂತೂ ತಮ್ಮ ಹಳ್ಳಿ, ಮನೆ, ಕಷ್ಟ, ಸುಖದ ವಿಷಯಗಳನ್ನು ಬಸ್ಸಿನಲ್ಲಿರುವವರಿಗೆಲ್ಲಾ ಕೇಳುವಂತೆ ಮಾತಾಡುತ್ತಿದ್ದರು. ನನ್ನ ಪಕ್ಕ ಕುಳಿತಿದ್ದ ಬಳೆಗಾರ ಮಾತ್ರ ಕಿಟಕಿಯೆಡೆಗೆ ಮುಖ ಮಾಡಿ ಏನನ್ನೋ ಧೀರ್ಘವಾಗಿ ಯೋಚಿಸುತ್ತಿದ್ದ. ಆತನ ಎಡಗೈ ನೇತುಹಾಕಿದ್ದ ಬಳೆಗಳನ್ನು ಸುರಕ್ಷಿತವಾಗಿ ಕಾಯುವ ಜವಾಬ್ದಾರಿ ಹೊತ್ತಿತ್ತು. ಬಲಗೈ ಎಲ್ಲಿತ್ತು ಎನ್ನಬೇಡಿ ನಾನದನ್ನು ಗಮನಿಸಲಿಲ್ಲ. ತಕ್ಷಣವೇ ಟಿಕೇಟ್ ಟಿಕೇಟ್ ಎಂದು ಬಳೆಗಾರನ ಬಳಿಗೆ ಕಂಡಕ್ಟರ್ನ ಕೈ ಚಾಚಿಕೊಂಡಿತು. 4 ಸಲ ಅಲ್ಲ 40 ಸಲ ಕಿರುಚಿದರೂ ಒಂದೇ ಟಿಕೇಟ್ ಕೊಳ್ಳುವುದು ಎಂಬತ್ತಿತ್ತು ಬಳೆಗಾರನ ನೋಟ. ಮತ್ತೆ ಗಂಭೀರವದನನಂತೆ ಕಿಟಕಿಯೆಡೆಗೆ ಆತನ ಮುಖ ತಿರುಗಿತು.

ಪ್ರಯಾಣದ  ವೇಳೆಯಲ್ಲಿ ಪಕ್ಕದವರ ತಲೆ ತಿನ್ನದಿದ್ದರೆ ನನ್ನ ತಲೆ ನಿಲ್ಲಲ್ಲ. ಚರ್ಚೆಗಳೆಂದರೆ ಇಷ್ಟಪಡುವ ನಾನು ಆತನನ್ನು, ಈಗಲೂ ಜನ ಬಳೆಗಳನ್ನು ಕೊಳ್ಳುತ್ತಾರಾ? ಅದರಿಂದ  ಬರುವ ಲಾಭ ನಿಮ್ಮ ಜೀವನಕ್ಕೆ ಆಗುತ್ತದಾ? ಎಂಬ ಪ್ರಶ್ನೆಗಳಿಂದ ಮಾತಿಗೆ ಎಳೆದೆ. ನೀವು ಹೇಳಿದ್ದು ನಿಜ ಹಿಂದಿನಂತೆ ಬಳೆಗಳಿಗೆ ಬಳೆಗಾರನನ್ನು ಕಾಯುವ ಅವಶ್ಯಕತೆ ಜನರಿಗಿಲ್ಲ. ಪ್ರತಿ ಊರುಗಳಲ್ಲೂ ಹೆಣ್ಣುಮಕ್ಕಳು ಬಯಸುವ ಎಲ್ಲಾ ರೀತಿಯ ಅಲಂಕಾರಿಕ ವಸ್ತುಗಳು ದೊರೆಯುತ್ತವೆ. ಆದರೆ ಕೆಲವು seasonಗಳಲ್ಲಿ, ಜಾತ್ರೆಗಳಲ್ಲಿ ಸ್ವಲ್ಪ ಚೆನ್ನಾಗಿ ವ್ಯಾಪಾರ ವಹಿವಾಟು ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಉತ್ತರ ಆತನದಾಗಿತ್ತು.

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸಣ್ಣ ಪುಟ್ಟ ವ್ಯಾಪಾರಗಳಿಗೆ ಹಣಕಾಸಿನ ನೆರವು ನೀಡಿ ಹಳ್ಳಿಗರನ್ನು ಸ್ವಾವಲಂಬಿಗಳಾಗಿ ಬದುಕಲು ಅನುವು  ಮಾಡಿಕೊಡುತ್ತಿರುವುದು ಆತನಿಂದ ತಿಳಿಯಿತು. ಪ್ರತಿ ಹಳ್ಳಿಯಲ್ಲಿ ಕೆಲವು ಜನ ಹೆಂಗಸರು ಸೇರಿ ಒಂದು ಸಂಘದ ರಚನೆ ಮಾಡುತ್ತಾರೆ, ಅಧ್ಯಕ್ಷೆ , ಉಪಾಧ್ಯಕ್ಷೆ, ಸದಸ್ಯರುಗಳೆಂಬ ವಿವಿಧ ಸ್ಥಾನಗಳನ್ನೋಳಗೊಂಡ ಆ ಸಂಘದ ಎಲ್ಲರೂ ತಮ್ಮ ತಮ್ಮ ವ್ಯಾಪಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಸಾಲ ಪಡೆಯುತ್ತಾರೆ. ಪ್ರತಿ ವಾರಕ್ಕೊಮ್ಮೆ ಇಂತಿಷ್ಟು ಹಣ ಕಟ್ಟಿ ಸಾಲ ತೀರಿಸಬಹುದಾದ ವ್ಯವಸ್ಥೆಯುಳ್ಳದ್ದಾಗಿದೆ. ಆತನಿಂದ ತಿಳಿದ  ಮತ್ತೊಂದು ವಿಷಯವೆಂದರೆ ಆ ರೀತಿ ಸಾವಿರಾರು ಸಂಘಗಳು ಬಹಳ ವ್ಯವಸ್ಥಿತವಾಗಿ ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವುದು. ಕೇವಲ ತುಮಕೂರು ಜಿಲ್ಲೆಗೆ 114 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ ಎಂದರೆ ಇದರ ಲಾಭ ಪಡೆದ ಜನರೆಷ್ಟು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು. ಆ ರೀತಿಯ ಯೋಜನೆಗಳು ಹಳ್ಳಿಗರಿಗೆ ಸ್ವಉದ್ಯೋಗ ಮಾಡಲು ಉತ್ತೇಜಿಸುವ ಜೊತೆಗೆ, ಎಲ್ಲರ ನಡುವಿನ ಸಹಬಾಳ್ವೆಗೆ ಕಾರಣವಾಗುತ್ತಿರುವುದು ಶ್ಲಾಘನೀಯ.

ಧರ್ಮಸ್ಥಳವೆಂದರೆ ತಲೆಬೋಡು ಮಾಡಿಸಿಕೊಳ್ಳುವುದು ನೆನಪಾಗುವುದು ಬಿಟ್ಟರೆ ನನಗಿನ್ನೇನೂ ತಿಳಿದಿರಲಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳದಿಂದ ಈ ರೀತಿ ಅದೆಷ್ಟೋ ಜನಪರ ಕಾರ್ಯಗಳಾಗುತ್ತಿರುವುದು ಆತನಿಂದ ತಿಳಿದಂತಾಯಿತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪರಿಶ್ರಮ ಆತನ ಮಾತುಗಳಲ್ಲಿ ತುಂಬಿತ್ತು. ಆತ ಸುಮಾರು 1 ಗಂಟೆ ನಿರರ್ಗಳವಾಗಿ, ಸುಲಲಿತವಾಗಿ ಅಚ್ಚ ಕನ್ನಡದಲ್ಲಿ ಎಲ್ಲವನ್ನೂ ವಿವರಿಸಿದ. ಆತ ಮಾತಾಡಿದ ರೀತಿ ಎಂಥಾ ಪದವೀಧರನನ್ನು ಮೂಲೆಗೆ ತಳ್ಳುವಂತಿತ್ತು. ಎಷ್ಟೇ ಆಗಲಿ ಸರ್ಟಿಫಿಕೇಟ್ಗಿಂತ ತಿಳವಳಿಕೆ, ಅನುಭವ ಮುಖ್ಯ ಅಲ್ಲವೇ.

ಆದರೆ ಇಂಥಾ ತಿಳುವಳಿಕೆ ಅಥವಾ ಹೊಸ ವಿಷಯಗಳು ನಾನು ಇತ್ತೇಚೆಗೆ ಹೊಸಪೇಟೆಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರುವಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ software engineer ನಿಂದ ದೊರೆಯಲಿಲ್ಲ. ಅಂದಹಾಗೆ ಹೊಸಪೇಟೆ ಎಂದರೆ ಗೊತ್ತಲ್ಲಾ ನಮ್ಮ ಮಧ್ಯ ಕರ್ನಾಟಕ. ಆಕಸ್ಮಾತಾಗಿ ನೀವೇನಾದರೂ ಅ ಸ್ಥಳದಿಂದ ಆಕಾಶವನ್ನು ಗಮನಿಸಿದ್ದೆ ಆದಲ್ಲಿ ಯಾರೋ ಬಟ್ಟೆಯಿಂದ ಶುಭ್ರವಾಗಿ ಆಕಾಶವನ್ನು ಸ್ವಚ್ಚವಾಗಿ ಒರೆಸಿದ್ದಂತೆ ಕಾಣುತ್ತದೆ. ಮೋಡಗಳು ಪರಸ್ಪರ ಮುನಿಸಿಕೊಂಡು ದೂರವಾಗಿವೆಯೇನೋ ಅನಿಸುತ್ತದೆ. ಇದು ನಮ್ಮ ಮಧ್ಯ ಹಾಗೂ ಉತ್ತರ ಕರ್ನಾಟಕದ ವೈಶಿಷ್ಟ್ಯ. ಆತನೊಂದಿಗೆ ಮಾತು ಶುರುಮಾಡಲು ಹಿಂಜರಿಕೆ. ಏನೇ ಕೇಳಿದರೂ 4 ಕ್ಕಿಂತ ಹೆಚ್ಚು ಪ್ರಶ್ನೆಗಳು ಹೊಳೆಯಲಿಲ್ಲ. ಎಲ್ಲಿ ಕೆಲಸ? ಯಾವ ಕಂಪನಿ ? technology? ಕೆಲಸ ಹೇಗಿರತ್ತೆ? ವೀಕೆಂಡ್ ಹೇಗೆ ಕಳಿತೀರಾ? ಎಲ್ಲದಕ್ಕೂ ಆತನಿಂದ one word answer ಕೆಲವೇ ನಿಮಿಷಗಳಲ್ಲಿ ಚರ್ಚೆ ಖಲ್ಲಾಸ್, ಒಡನೆ  ಮೂಡಿದ್ದು ನೀರವ ಮೌನ. ನಾನೆಷ್ಟೇ ಯೋಚನೆ ಮಾಡಿ ಪ್ರಶ್ನಿಸಿದರೂ ನಿರಾಸೆಯ ಉತ್ತರ. ಸರ್ವಸಂಘ ಪರಿತ್ಯಾಗಿಯಾಗಿ ಯಾವುದೋ ಮಠದ ಉತ್ತರಾಧಿಕಾರಿಯಂತೆ ಆತನ ಉತ್ತರಗಳು ಬರುತ್ತಿದ್ದವು.

ಆತನ ಉತ್ತರಗಳಿಂದ ಬೇಸತ್ತ ನನಗೆ ನನ್ನ ಸೀಟನ್ನು ಹಿಂದಕ್ಕೆ ತಳ್ಳಿ ನಿದ್ರಿಸುವುದು ಬಿಟ್ಟು, ಮತ್ತೇನೂ ಮಾಡಲಾಗಲಿಲ್ಲ. ಬಳೆಗಾರನ ಭೇಟಿಯಿಂದ ಸಿಕ್ಕ ಆತ್ಮೀಯ ಚರ್ಚೆ ಇಲ್ಲಿ ಸಿಗಲಿಲ್ಲ. ಆದರೆ ನಗರ ಪಟ್ಟಣಗಳ ಜನರು ಸಹಜವಾಗಿ ಮಿತಭಾಷಿಕರಾಗುತ್ತಿರುವುದು, ಆತ್ಮೀಯವಾಗಿ ಬೇರೆಯವರೊಡನೆ ಬೆರೆಯದಿರುವುದು, ಅಕ್ಕಪಕ್ಕವೇ ಕುಳಿತಿದ್ದರೂ ಮೂಗರಂತೆ ಮೌನಕ್ಕೆ ಶರಣಾಗುವುದು, ನೆರೆಹೊರೆಯಲ್ಲಿದ್ದರೂ ಸುಳಿವೇ ಇಲ್ಲದಂತೆ ಬದುಕುತ್ತಿರುವುದು ಪಾಶ್ಚಾತ್ಯ  ಜೀವನ ಶೈಲಿಯ ಅನುಕರಣೆಯ ಪರಿಣಾಮವಲ್ಲದೆ ಮತ್ತೇನೂ ಅಲ್ಲ. ಇದೇನೇ ಇರಲಿ ಹಳ್ಳಿಗರನ್ನು ಸ್ವಾಭಿಮಾನಿಗಳನ್ನಾಗಿ, ಸ್ವತಂತ್ರವಾಗಿ ಬದುಕುವಂತೆ, ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದಂತೆ, ಇನ್ನೂ ಹಲವು ಸಂಸ್ಥೆಗಳು ಹಣಬೆಗಳಂತೆ ಬೆಳೆಯಲಿ.