ಸೋಮವಾರ, ಆಗಸ್ಟ್ 15, 2011

ಉಪೇಂದ್ರ ಎಂಬ MODERN ವೇದಾಂತಿ !!

ಚಿತ್ರ H2O (ನನ್ನ ಇಷ್ಟದ ಚಿತ್ರಗಳಲ್ಲಿ ಒಂದು ) :

'ನಾನು ನಂದು ಅನ್ನೋ ಸ್ವಾರ್ಥ ಬಿಟ್ಟು ನಿಂಗೆ ಕೆಟ್ಟದಾದ್ರೂ ಪರವಾಗಿಲ್ಲ ಬೇರೆಯವರಿಗೆ ಒಳ್ಳೆಯದಾಗಲಿ ಅನ್ನೋ ಒಳ್ಳೆ ಮನಸಿಟ್ಟು ಬೇರೆಯವರನ್ನ ನೋಡು. ವಿಕಾರವಾಗಿರೋದು ನನ್ನ ಮುಖ ಅಲ್ಲ ನಿನ್ನ ಮನಸ್ಸು. ಕೆಟ್ಟ ಮನಸಿಟ್ಟು ನೋಡುದ್ರೆ ಎಲ್ಲಾ ವಿಕಾರವಾಗೆ ಕಾಣ್ಸುತ್ತೆ. ಒಳ್ಳೆ ಮನಸಿಟ್ಟು ನೋಡು ಎಲ್ಲಾ ಸುಂದರವಾಗೇ ಕಾಣ್ಸುತ್ತೆ Idiot. ಬಿಕ್ಷುಕ ಕಷ್ಟಪಡ್ತಿನಿ ಅಂದ ಅವನಿಗೆ ಒಂದು ಬೈಕ್ ಕೊಡ್ಸಿದಿನಿ. ರೈತ ಕಷ್ಟಪಡ್ತಿನಿ ಅಂದ ಅವನಿಗೆ ಹೊಲ ಕೊಡ್ಸಿದಿನಿ. 90X60 ಬಡವರಿಗೆ ಬಿಟ್ಟು ಕೊಡು 10X20 ಲಿ ನೀನ್ ಮನೆ ಕಟ್ಕೊ. ನಿಂಗೆ ಬೇಕಾದ್ದನ್ನ ಇಟ್ಕೊಂಡು ಉಳಿದಿದ್ದನ್ನ ಬೇರೆಯವರಿಗೆ ಕೊಡೋದು ತಪ್ಪಲ್ಲ. ನೀನ್ Discovery channel ನೋಡಿದಿಯಾ, ಅದರಲ್ಲಿ ಒಂದು ಬಲಿಷ್ಟವಾದ ಪ್ರಾಣಿ ಒಂದು ಸಣ್ಣ ಪ್ರಾಣಿನ ಕಿತ್ತು ತಿನ್ನುತ್ತೆ, ಅದೇ ರೀತಿ ಮನುಷ್ಯನು ತನ್ನ ಬುದ್ದಿವಂತಿಕೆ ಉಪಯೋಗಿಸಿ ಒಬ್ಬನ್ನೊಬ್ಬ ಹೊಡೆದು ಬದುಕ್ತಾನೆ ಅದು ಸರಿ ಅಂತಿಯಾ ?. ಈ ಸಮಾಜದಲ್ಲಿ ಬುದ್ದಿವಂತರು, ದಡ್ಡರು, ಶಕ್ತಿ ಇರೋರು, ದುರ್ಬಲರು ಎಲ್ಲಾ ಇದಾರೆ. ಹಂಚಿಕೊಂಡು ಬದುಕೋದರಲ್ಲಿ ಒಂಥರಾ ಸುಖ ಇದೆ. ದಯವಿಟ್ಟು ಕೈ ಮುಗಿದು ಕೇಳ್ಕೊತೀನಿ ಆ ಸೈಟ್ ನನ್ ಹೆಸರಿಗೆ ಬರಿ ನಾನ್ ಜನಕ್ಕೆ ಕೊಡ್ತೀನಿ.'

ಚಿತ್ರ A :

'ಏನ್ ತಮಾಷೆ ಮಾಡ್ತಾ ಇದ್ದೀಯ ಇಲ್ಲಿ? ಏನ್ ಆಟ ಆಡ್ತಾ ಕೂತಿದಿಯಾ ಇಲ್ಲಿ?, ದೇಶ ಬೆಂಕಿ ಹತ್ತಿ ಉರಿತಾ ಇದೆ. ಬಡ ಜನ್ರು,
ಒಳ್ಳೆ ಜನ್ರ ಹೊಟ್ಟೆ ಉರಿತಾ ಇದೆ. ಶ್ರೀಮಂತ್ರ ಹೊಟ್ಟೆ ಊದ್ತಾ ಇದೆ. ಏನ್ ಮಜಾ ತಗೊಂಡ್ ಕೂತಿದಿಯಾ ಇಲ್ಲಿ ? ಎಷ್ಟೊಂದ್ ಖರ್ಚು!! ಖರ್ಚು!!.. ಯಾಕ್ ಗಣೇಶ.., ನೀನ್ ಸರ್ವಶಕ್ತ ತಾನೇ ಯಾಕ್ ಈ ರೀತಿ ಜನಗಳ ಕೈಲಿ ಒಳ್ಳೇದು ಕೆಟ್ಟದ್ದು ಅಂತ ಮಾಡ್ಸಿ ಪಾಪಿ, ಪುಣ್ಯವಂತ ಅಂತ ಮಾಡ್ತಿಯಾ?, ಯಾಕ್ ಈ ರೀತಿ ತೊಂದ್ರೆಗಳ್ನಾ ಕೊಡ್ತಿಯಾ?. ಕೆಟ್ಟವ್ರ್ನೆಲ್ಲಾ ಸಾಯಿಸ್ಬಿಡು ಒಳ್ಳೆವ್ರ್ನೆಲ್ಲಾ ಚೆನ್ನಾಗಿಡು. ತಗೋ (ಗನ್ ಕೊಡುತ್ತಾ ) ತಾಕತ್ ಇದ್ರೆ ಸಾಯಿಸ್ಬಿಟ್ ಬಾ ಹೋಗು. ಆಗಲ್ಲಾ!!.. ನಿನ್ ಕೈಲಿ ಆಗಲ್ಲಾ!!.. ಯಾಕೆ ಅಂತ ನಂಗ್ ಗೊತ್ತು. ಜನಗಳ್ಗೆ ಕಷ್ಟ ಕೊಟ್ರೆ ತಾನೇ ನಿನ್ ಹತ್ರ ಬರ್ತಾರೆ, ಪೂಜೆ ಮಾಡ್ತಾರೆ, ಆರತಿ ಬೆಳಗ್ತಾರೆ, ಹಣ್ಣು ಕಾಯಿ ಇಡ್ತಾರೆ.. ನಿಂಗೆ lime light ಬೇಕು lime light!!... stardom stardom!!.. ನಿನಗೂ ನಮ್ ಪುಡಾರಿಗಳ್ಗೂ ವ್ಯತ್ಯಾಸಾನೇ ಇಲ್ಲ. ನಿನಗಿಂತ ನಮ್ ಎಷ್ಟೋ ಜನ scientists ಗಳೇ ವಾಸಿ.. ಗಜಮುಖ!! ಗಜಮುಖ!!.. ವೀರಪ್ಪನ್ ಸಾವಿರ ಆನೆಗಳ್ನಾ ಸಾಯಿಸ್ತಾ ಏನ್ ಮಾಡ್ದೆ ನೀನು ?.. ಆರಾಮವಾಗಿ ಅವ್ನು ಓಡಾಡ್ಕೊಂಡು ಇದಾನೆ, ನಾಳೆ ಮಂತ್ರಿನೂ ಆಗ್ತಾನೆ.. ವರ್ಷಕ್ಕೆ ಎರಡು ದಿನ ಬರ್ತಿಯಾ ಆರ್ಕೆಸ್ಟ್ರಾ ಹಾಕ್ಕೊಂಡು, ಡೆಕೊರೆಶನ್ ಮಾಡ್ಕೊಂಡು ಡಾನ್ಸ್ ಮಾಡಿ ಹೋಗ್ತಿಯಾ. ನಾನೇ ವಾಸಿ ೪ ಜನ ಕೆಟ್ಟೋರ್ನಾ ಮೇಲಕ್ಕೆ ಕಳ್ಸಿ ಬಂದಿದೀನಿ ಗೊತ್ತಾ. ನೀನಿಲ್ಲಿ ಇರೋದು ಸರಿ ಅಲ್ಲ, ನಿನ್ ಕೆಲ್ಸ ನೀನ್ ಕರಕ್ಟಾಗಿ ಮಾಡ್ತಾ ಇಲ್ಲ. ನೀನಿಲ್ಲಿ ಇರಬಾರ್ದು (ಎಂದು ಗಣೇಶನ ಮೂರ್ತಿಯನ್ನ ಬಾವಿಗೆ ಹಾಕುವ ಸಂದರ್ಭ)'.

ಚಿತ್ರ ಉಪೇಂದ್ರ :

'೧). ಕಷ್ಟ ಕಷ್ಟ.. ನೀನ್ ಪಡ್ತಿಯ ಕಷ್ಟ... ಕಷ್ಟ ಪಡೋನು ರೈತ.. ರೈತ ಕಷ್ಟಪಟ್ಟು ತಂದು ಅಂಗಡಿಗೆ ಹಾಕ್ತಾನೆ. ಜನಗಳು ಕಷ್ಟಪಟ್ಟು ಅದನ್ನ ತಗೊಂಡ್ ಹೋಗ್ತಾರೆ. ನೀನೇನ್ ಮಧ್ಯದಲ್ಲಿ ಕೂತ್ಕೊಂಡ್ ಅಲ್ಲಾಡ್ಸೋದು?.. ಕಷ್ಟಪಡ್ತನಂತೆ ಕಷ್ಟ..!! ನಿಮ್ಮಪ್ಪ ಮಾಡಿರೋ ಅಂಗಡಿ, ಆಸ್ತಿಲಿ ಕೂತ್ಕೊಂಡ್ ಆರಾಮವಾಗಿ ಇದಿಯಾ.. ಈ ನಿನ್ ದಾಂಡಿಗ ಮಗ ಕೂತ್ಕೊಂಡ್ ತಿಂತಾನೆ. ನೋಡು ನಮ್ ದೇಶಕ್ಕೆ ಬೇಕಾಗಿರೋದು ಇಂತ ದಾಂಡಿಗ ನನ್ ಮಗ ಅಲ್ಲ.. ವಿಶ್ವೇಶ್ವರಯ್ಯ..!! ಬೀದಿ ದೀಪದ ಕೆಳ್ಗೆ ಓದುದ್ರಲ್ಲ ಅಂತ ವಿಶ್ವೇಶ್ವರಯ್ಯ..!! first of all ನನ್ ಮಗಂದು ಅಪ್ಪನ ದುಡ್ಡು ಮಗ ತಿನ್ನೋದೇ ದೊಡ್ಡ ತಪ್ಪು. ನಾನೇನಾದ್ರೂ PM ಆದ್ರೆ ಅಪ್ಪನ ಆಸ್ತಿ ಮಗನಿಗೆ ಹೋಗೋದನ್ನ BAN ಮಾಡ್ತಿನಿ. ಆ ತರಹ ಮಾಡದ್ರೆ ನಿಮ್ಮಂತಹ ನನ್ ಮಕ್ಳು 4,4 ತಲೆಮಾರಿಗೆ ಆಗೋಷ್ಟು ಆಸ್ತಿ ಮಾಡಲ್ಲ.. ಎಲ್ಲ EQUAL ಆಗಿ ಇರ್ತಾರೆ..'
೨). ಓ ಆ ಥರಾ ಲವ್ ಮಾಡ್ಬೇಕಾ..? ಅದು ಲವ್ ಅಲ್ಲ ಅದು TT..!! ನೀನ್ ಲವ್ ಮಾಡ್ತಿಯಾ ಅನ್ನೋ ಬದ್ಲು TT ಮಾಡ್ತಿಯಾ ಅಂತ ಕೇಳಿದ್ರೆ ರೆಡಿ ಅಂತಿದ್ದೆ ನಾನು. ನೋಡು ಆ ನನ್ ಮಕ್ಳಿಗೆ ಲವ್ ಅಂದ್ರೆ ಏನ್ ಗೊತ್ತು.? ಹಾಗೆ ತಬ್ಕೊಂಡ್ ಹೊರಳಾಡ್ತಾ ಇದಾರೆ, ಕಚಡ ನನ್ ಮಕ್ಳು... ಯೌವ್ವನದ ಕಟ್ಟೆ ಹೊಡಿತಿದ್ದ ಹಾಗೆ, ಆರಡಿ ಮೂರಡಿ ಜಾಗ ಸಿಕ್ಕದ್ರೆ ಸಾಕು ಎಲ್ಲೆಂದ್ರಲ್ಲಿ ಲವ್ ಮಾಡ್ತಾರೆ. ಪಾರ್ಕಲ್ಲಿ ಮಾನ ಮರ್ಯಾದೆ ಬಿಟ್ಟು ಲವ್ ಮಾಡ್ತಾರೆ, ಮಾರುತಿ 800 ಲ್ಲಿ ಕಷ್ಟ ಪಟ್ಕೊಂಡ್ ಲವ್  ಮಾಡ್ತಾರೆ ನನ್ ಮಕ್ಳು.. ಲವ್ ಅಂತೆ ಲವ್ ಥೂ.. ಅದಕ್ಕೆ ಪವಿತ್ರವಾದ ಲವ್ ಅನ್ನೋ ಹೆಸರು ಬೇರೆ ಇಟ್ಕೊಂಡ್ ಓಡಾಡ್ತಾರೆ. ಅದೆಲ್ಲ ಲವ್ವೇ ಅಲ್ಲ. ನಾನ್ ನಿಂಜೊತೆ ಮಾಡ್ತಿರೋ ಲವ್ english ಲವ್ ಅಲ್ಲ ತಿಳ್ಕೋ. ಅಚ್ಚ ಕನ್ನಡದ ಪ್ರೀತಿ, ಪ್ರೇಮ, ಒಲವು.. ಒಲವೆ ಜೀವನ ಸಾಕ್ಷಾತ್ಕಾರ. ನೋಡುಲವ್ ಅನ್ನೋದು ಎದೆ ಮೇಲಿದ್ರೆ ಪ್ರೀತಿ, ಅದರಿಂದ ಕೆಳಗಿದ್ರೆ 
ಅದು...'

ಚಿತ್ರ ರಕ್ತಕಣ್ಣೀರು :

ಆ ಧರ್ಮ... ಧರ್ಮ ಅಲ್ಲ ನೀವು ಮಾಡಿರೊಂತ ಕರ್ಮ. ಇಡೀ ದೇಶದಲ್ಲಿರೊಂತ ಪ್ರತಿಯೊಂದು ಹೆಣ್ಣು ಮಾಡಿರೊಂತ  ಕರ್ಮ. ಹೆಣ್ಣು ಗಂಡಿಗಿಂತ ದೈಹಿಕವಾಗಿ ಬಿಟ್ರೆ ಮಾನಸಿಕವಾಗಿ, ಬೌದ್ದಿಕವಾಗಿ, ಭಾವನಾತ್ಮಕವಾಗಿ ಕೆಲಸ ಮಾಡೋದ್ರಿಂದ ಹಿಡಿದು ಮೈಥುನ ಕ್ರಿಯೆವರೆಗೂ ಎಲ್ಲದರಲ್ಲೂ ಅವಳು ಮುಂದೆ ಇದಾಳೆ. ಆ ಭಯ ಗಂಡಿಗೆ ಇರೋದ್ರಿಂದಾನೆ ಅವಳನ್ನ ಸಂಸ್ಕೃತಿ, ಆಚಾರ, ವಿಚಾರ ಅನ್ನೋ ಮನೇಲಿ ಬಂಧಿಸಿ ಅವನು ಹೊರಗಡೆ ಜಾಲಿ ಆಗಿ ಇರೋದಕ್ಕೆ ಶುರು ಮಾಡ್ದ. sentimental fools ಆಗಿರೋ ನಿಮ್ಮನ್ನ exploit ಮಾಡಿ enjoy ಮಾಡೋಕೆ ಶುರು ಮಾಡ್ದ. ಗಂಡು ಮಾಡಿದರೆ ರಸಿಕತನ ಹೆಣ್ಣು ಮಾಡಿದರೆ ಹಾದರ ಅನ್ನೋದನ್ನ ನೀವೇ ಒಪ್ಕೋತಾ ಹೋದ್ರಿ. ಆಳೋ ಕೆಲ್ಸನ ಗಂಡಿಗೆ ಕೊಟ್ಟು ಅಳೋ ಕೆಲ್ಸನ ನೀವ್ ಇಟ್ಕೊಂಡ್ರಿ. ಜೀವನದ ಗಾಡಿ ಸರಾಗವಾಗಿ ಓಡೋದಕ್ಕೆ ಒಬ್ಬ life partner ಬೇಕು. ಅದನ್ನ ಮರೆತು ಅಪ್ಪ ಹಾಕಿರೋ ಆಲದಮರ ಅಂತ ಅಳ್ತಾ ಅಳ್ತಾ ಕಣ್ಣೀರಿಡ್ತಾ ಕೂರಬಾರದು. ಶೀಲ, ತಾಳಿ, ಸಪ್ತಪದಿ ಅನ್ನೋದು ಬರೀ ಹೆಣ್ಣಿಗೆ ಸಂಬಂಧಪಟ್ಟದ್ದಲ್ಲ, ಅದು ಗಂಡಿಗೆ ಕೂಡ ಅನ್ವಯಿಸತ್ತೆ ಅನ್ನೋದನ್ನ ಈ ಸಮಾಜಕ್ಕೆ ಸಾರಿ ಹೇಳೋಣ. ಕೆರೆ, ಬಾವಿ, ಕೇವಲ ಮೂರಡಿ ಹಗ್ಗದಲ್ಲಿ ತಮ್ಮ ಆತ್ಮನ ಕಳ್ಕೊಳೋ ರಕ್ತಕಣ್ಣೀರಿನ ಕಥೆ ಇವತ್ತಿಗೆ ಕೊನೆಯಾಗಲಿ. ರಕ್ತಕಣ್ಣೀರಿನ ದುರಂತದ ಕಥೆ ಇವತ್ತಿಗೆ ನಿರ್ನಾಮವಾಗಲಿ. ಇನ್ಮೇಲಾದ್ರು ಮುಗ್ದ ಅಬಲೆಯರ ಬಾಳು ಸುಖಮಯವಾಗಿರಲಿ.

ಚಿತ್ರ  ಓಂ :

ಈ open world ನಲ್ಲಿ ಕೆಟ್ಟ ಮನಸ್ಸು, ಮೋಸ,  ಸ್ವಾರ್ಥಗಳಿಂದ ಮನುಷ್ಯರು ಹೊಡೆದಾಡ್ತಾರೆ. ಅದೇ underworld ನಲ್ಲಿ ಮಚ್ಚು ಕತ್ತಿಗಳಿಂದ ಹೊಡೆದಾಡ್ತಾರೆ. ಆ  ಮಾನಸಿಕ ಯುದ್ದಕ್ಕಿಂತ ಈ ದೈಹಿಕ ಯುದ್ದಾನೆ ಮೇಲು.


-----------------------------------------------------------------------------------------------------------

ಮೇಲಿನ ಸಂಭಾಷಣೆಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಉಪೇಂದ್ರರಲ್ಲಿ ಇರುವಂತಹ ಸಾಮಾಜಿಕ ಕಳಕಳಿ ತಿಳಿಯುತ್ತದೆ. ಸಮಾಜದಲ್ಲಿ ಇಂದು ಬೃಹದಾಕಾರವಾಗಿ ಬೆಳೆದಿರುವಂತಹ ಸಾಮಾಜಿಕ ಅಸಮಾನತೆ, ಅನ್ಯಾಯ ಅಕ್ರಮಗಳು, ಸಂಪ್ರದಾಯ ಸಂಸ್ಕೃತಿ ಸಂಸ್ಕಾರಗಳನ್ನ ಗಾಳಿಗೆ ತೂರಿ ಸ್ವೇಚ್ಚಾಚಾರಿಗಳಾಗಿ ಬದುಕುತ್ತಿರುವುದು, ಜೀವನ ಅಂದರೇನೆ ಮಜಾ ಮಾಡೋದು, ಶೋಕಿ ಮಾಡೋದು, ನಾನು ನಂದು ಅನ್ನೋ ಸ್ವಾರ್ಥದಿಂದ ಬಾಳೋದು ಅಲ್ಲ ಎಂಬುದನ್ನ ಅವರದೇ ಆದ ಶೈಲಿಯಲ್ಲಿ ಭಿನ್ನವಾಗಿ ಚಿತ್ರಿಸುವುದನ್ನ ಇವರ ಸಿನಿಮಾಗಳಲ್ಲಿ ಮಾತ್ರವೇ ನೋಡಲು ಸಾಧ್ಯ.

ಯಾವುದೇ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಾಗ ಬಹಳ ಜವಾಬ್ದಾರಿಯುತವಾಗಿ ನಡೆಯಬೇಕಾಗುತ್ತದೆ. ಸಾಮಾಜಿಕ ಜವಾಬ್ದಾರಿ ಹೊರಬೇಕಾಗುತ್ತದೆ. ಏಕೆಂದರೆ ಅಂತಹವರನ್ನ ಅನುಸರಿಸುವವರು ಸಾಕಷ್ಟು ಇರುತ್ತಾರೆ. ಮೌಲ್ಯಗಳಿಗೆ ಬೆಲೆ ಕೊಡುವವನು ಮಾತ್ರ ಸಾಮಾಜಿಕ ಜವಾಬ್ದಾರಿ ಹೊರಲು ಸಾಧ್ಯ, ಸಾಮಾಜಿಕ ಕಳಕಳಿ ಹೊಂದಿರಲು ಸಾಧ್ಯ. ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ ಉಪೇಂದ್ರರ ಚಿತ್ರಗಳಲ್ಲಿ ಅದು ಬಿಂಬಿತವಾಗಿರುತ್ತದೆ. ಈ ಗೊಡ್ಡು ಹಿಡಿದ ಅನ್ಯಾಯಭರಿತ ಸಮಾಜದ ವಿರುದ್ದ ಒಂದು ಏರು ಧ್ವನಿ ಅವರ ಚಿತ್ರದಲ್ಲಿರುತ್ತದೆ.
ಉದಾಹರಣೆಗೆ..
H2O : ಉಪೇಂದ್ರರ ಜಾಣ್ಮೆಗೆ ಇದೊಂದು ಚಿತ್ರ ಸಾಕು. ಪಾತ್ರಗಳ ಸೃಷ್ಟಿಯಂತೂ ಅದ್ಭುತ. ಕರ್ನಾಟಕ ಹಾಗೂ ತಮಿಳುನಾಡಿನ ಮನಸುಗಳ ನಡುವೆ ಆಗ್ಗಾಗ್ಗೆ ಉದ್ಭವಿಸುವ ರಾಜಕೀಯ ಪ್ರೇರಿತ ಜಗಳ, ದ್ವೇಷಗಳು ಕೇವಲ ನನ್ನದು ನನ್ನದು ಎಂಬ ಸ್ವಾರ್ಥಪರ ಮನಸ್ಥಿತಿಯಿಂದ. ಈ ಮನಸ್ಥಿತಿಗೆ ಚಿತ್ರಾಂತ್ಯದಲ್ಲಿ ಬರುವ ಒಂದು ದೇಹ ಎರಡು ತಲೆ ಹೊಂದಿರುವ ಪಾತ್ರ ತಕ್ಕ ಉತ್ತರ ಕೊಡುತ್ತದೆ. ಒಂದು ಜೀವಕ್ಕೆ ಬದುಕಬೇಕೆಂಬ ಆಸೆ, ಮತ್ತೊಂದಕ್ಕೆ ಸಾಯುವ ಹಂಬಲ. ಒಬ್ಬರು ಬದುಕಬೇಕೆಂದರೆ ಇಬ್ಬರೂ ಬದುಕಬೇಕು. ಒಬ್ಬರು ಸಾಯಬೇಕೆಂದರೆ ಮತ್ತೊಬ್ಬರೂ ಸಾಯಬೇಕು. ಯಾವ ರೀತಿ ಇವರ ಸಮಸ್ಯೆಗೆ ಉತ್ತರ ಇಲ್ಲವೋ, ಅದೇ ರೀತಿ ಕಾವೇರಿ ನದಿಯ  ಸಮಸ್ಯೆಗೆ ಉತ್ತರ ಇಲ್ಲ. ಅದು ಯಾರ ಸ್ವತ್ತೋ ಅಲ್ಲ ಪ್ರಕೃತಿಯ ಸ್ವತ್ತು. supreme court ಕೂಡ ಕೊಡಲಾಗದ ತೀರ್ಪನ್ನು ಉಪೇಂದ್ರ ಕೊಟ್ಟಿದ್ದಾರೆ.

ಸೂಪರ್ : ಅವರ ಇತ್ತೀಚಿನ ಚಿತ್ರ ಸೂಪರ್ ಬಹು ದೊಡ್ಡ ಸಂದೇಶವನ್ನ ಸಾರುವ ಚಿತ್ರ. ಈ ಜಗತ್ತೆಲ್ಲಾ ನಮ್ಮದು, ಜಗತ್ತಿನಲ್ಲಿರುವವರೆಲ್ಲಾ ನಮ್ಮವರು, ಒಬ್ಬರನ್ನೊಬ್ಬರು ಪ್ರೀತಿ, ಸ್ನೇಹ, ಆದರಗಳಿಂದ ಕಾಣಬೇಕು ಕೂಡಿಬಾಳಬೇಕು. ಅದರಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ, ಮನುಕುಲದ ಅಭಿವೃದ್ದಿ ಸಾಧ್ಯ ಎಂಬ ದಿಟ್ಟ ಸಂದೇಶ ರವಾನಿಸಿದ್ದಾರೆ. ಈ ಚಿತ್ರದಲ್ಲಿ ಸರಿಯಾಗಿ ಗಮನಿಸಿ ನೋಡಿ ದೇಶ ವೈಜ್ಞಾನಿಕವಾಗಿ ಬಹು ದೊಡ್ಡದಾಗಿ ಬೆಳೆದಿರುತ್ತದೆ. ಆದರೆ ಜನರ ಉಡುಪು, ಭಾಷೆ, ಭಾವನೆಗಳಲ್ಲಿ ಯಾವುದೇ ಬದಲಾವಣೆಗಳಾಗಿರುವುದಿಲ್ಲ. ಅದರರ್ಥ, ನಾವು ಎಷ್ಟೇ ಮುಂದುವರೆದರೂ ಸ್ವಂತಿಕೆಯನ್ನ ಕಳೆದುಕೊಳ್ಳಬಾರದು. ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನ ಗಾಳಿಗೆ ತೂರಿ ಬದುಕಬಾರದು. ಹುಡುಕುತ್ತಾ ಹೋದರೆ ಈ ರೀತಿಯಾದ ಸಾಕಷ್ಟು ಸಂದೇಶಗಳು ಸಿಗುತ್ತವೆ.

ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳು :
೧). ಅದು ನಾನು PUC ಓದುತ್ತಿದ್ದ ದಿನಗಳು. ರಕ್ತಕಣ್ಣೀರು ಚಿತ್ರ ಬಿಡುಗಡೆಯಾಗಿ ಒಂದು ವಾರ ಆಗಿತ್ತು. ನಮ್ಮ ಇಂಗ್ಲೀಷ್ lecturer class ತಗೊಂಡಿದ್ರು. ಸ್ವಲ್ಪ ಸಮಯದ ನಂತರ ಅವರು ರಕ್ತಕಣ್ಣೀರು ಸಿನೆಮಾ ಎಷ್ಟು ಜನ ನೋಡಿದಿರಾ ಕೈ ಎತ್ತಿ ಎಂದರು. ೮-೯ ಜನ ಕೈ ಎತ್ತಿದ್ದು ನೋಡಿ ಬಹಳ ಕೋಪಗೊಂಡ lecturer ಉಳಿದವರನ್ನೆಲ್ಲ ಬೈದರು. ಒಂದು ಅರ್ಥಗರ್ಭಿತ ಚಿತ್ರ theatre ಗೆ ಬಂದಾಗ ನೋಡುವ ಅವಕಾಶ ಕಳ್ಕೋಬಾರದು ಅಂತ ಕಿವಿಮಾತು ಹೇಳಿದ್ದರು.
೨). ಅದು ನಾನು SIT ಯಲ್ಲಿ BE ಓದುತ್ತಿದ್ದ ಸಂದರ್ಭ. Personality development program ನಡೆಯುತ್ತಿದ್ದ ವೇಳೆ. ನಾನೂ ಪಾಲ್ಗೊಂಡಿದ್ದೆ. Trainer question ಹೀಗಿತ್ತು. Name one of the legendary personalities of karnataka?. ಎಲ್ಲರೂ ಕರ್ನಾಟಕದ Big personality ಹೆಸರುಗಳನ್ನ ಹೇಳಿದರು. ಮರುಕ್ಷಣ ಅವರ ಪ್ರಶ್ನೆ why not upendra?, why do you people dont look at good things?, why dont you call him one of the legendary personalities of karnaataka ?.. ಆಗ ನಾನೊಬ್ಬ ಮೂಕ ಪ್ರೇಕ್ಷಕನಾಗಿದ್ದೆ.
ಅಷ್ಟೇ ಏಕೆ 'ಸೂಪರ್' ಚಿತ್ರ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು ಗೊತ್ತಾ..? Upendra is one of the great directors in Indian cinema..

ಉಪೇಂದ್ರ ರೀತಿಯೇ ಸಾಮಾಜಿಕ ಕಳಕಳಿ ಇರುವ, ಸಿನೆಮಾ ಎಂಬುದು ಕಲೆ ಮಾತ್ರ, ವ್ಯಾಪಾರ ಅಲ್ಲ ಎಂದು ತಿಳಿದಿರುವ ಸಾಕಷ್ಟು ನಿರ್ದೇಶಕರು ನಮ್ಮ ಭಾರತ ಚಿತ್ರರಂಗದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಉದಾಹರಣೆಗೆ ಕನ್ನಡದಲ್ಲಿ ಶಂಕರನಾಗ್(ನಮ್ಮನ್ನ ಅಗಲಿದ್ದರೂ ಅಮರರಾಗಿರುವ ಮಹಾನ್ ಪ್ರತಿಭೆ), ರಾಜೇಂದ್ರಸಿಂಗ್ ಬಾಬು, ಸುನೀಲಕುಮಾರ್ ದೇಸಾಯಿ, ಗುರುಪ್ರಸಾದ್, ತೆಲುಗಿನಲ್ಲಿ ಶೇಖರ್ ಕಮ್ಮುಲ, ಪೂರಿ ಜಗನ್ನಾಥ್, ತಮಿಳಿನಲ್ಲಿ ಶಂಕರ್, ಮಣಿರತ್ನಂ, ವಿಜಯ್, ಗೌತಂ ವಾಸುದೇವ್ ಮೆನನ್, K S ರವಿಕುಮಾರ್, ಹಿಂದಿಯಲ್ಲಿ ರಾಜಕುಮಾರ್ ಸಂತೋಷಿ, ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಪ್ರಕಾಶ್ ಜಾ, ಅಶುತೋಷ್ ಗೊವಾರಿಕರ್, ಅನುರಾಗ್ ಕಶ್ಯಪ್ ಹೀಗೆ ಹಲವರಿದ್ದಾರೆ. ಇವರೆಲ್ಲರ ಸಾಲಿಗೆ ಉಪೇಂದ್ರ ಸೇರುತ್ತಾರೆ ಎಂಬುದು ಅಪ್ಪಟ ಕನ್ನಡದವರಾದ ನಮಗೆ ಹೆಮ್ಮೆಯ ವಿಷಯ. ನಾವು ಗೌರವಿಸುವ ವೇದಗಳು, ಪೂಜಿಸುವ ಪವಿತ್ರ ಗ್ರಂಥಗಳಾದ ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲೂ ಇದೆ ಜೀವನದ ಮೌಲ್ಯಗಳನ್ನ ಹೇಳಲಾಗಿದೆ. ಆದರೆ ಮೌಲ್ಯಗಳನ್ನ ಹೇಳುವ, ತೋರಿಸುವ ಉಪೇಂದ್ರರ ರೀತಿ ವಿಭಿನ್ನವಾಗಿರುತ್ತದೆ ಅಷ್ಟೇ. ಯಾವುದೇ ಆಗಲಿ ನೋಡುಗರು ಯಾವ ರೀತಿ ಗ್ರಹಿಸುತ್ತಾರೆ ಎಂಬುದರ ಮೇಲೆ ಆಧಾರವಾಗಿರುತ್ತದೆ. ಈ ಲೇಖನವನ್ನ ಒಬ್ಬ ಮೂಢ ಅಭಿಮಾನಿ ಬರೆದಿದ್ದಾನೆ ಎಂದು ತಿಳಿಯಬೇಡಿ. ಏಕೆಂದರೆ ಇದುವರೆವಿಗೂ ನಾನು theatre ಗೆ ಹೋಗಿ ನೋಡಿರುವ ಉಪೇಂದ್ರರ ಚಿತ್ರ ಒಂದೇ ಅದು 'ಸೂಪರ್'.

ಉಪೇಂದ್ರ ಒಬ್ಬ ಸಾಹಿತಿಯಾಗಿ :
ಉಪೇಂದ್ರ ಬಹಳ sharp and sensitive ವ್ಯಕ್ತಿ. ಸಣ್ಣ ಸಣ್ಣ ವಿಷಯಗಳನ್ನ ಬಹಳ ಚೆನ್ನಾಗಿ ಗಣನೆಗೆ ತಗೋತಾರೆ. ಸಾಹಿತ್ಯ ಗೀಚುವುದರಲ್ಲಿ ಎತ್ತಿದ ಕೈ. ಒಂದು ಕಾಲದಲ್ಲಿ ಅತ್ತ್ಯುತ್ತಮ ಸಾಹಿತ್ಯ ರಚನೆಕಾರರು, ಸಂಗೀತ ನಿರ್ದೇಶಕರು, ನಿರ್ದೇಶಕರಿಂದ ತುಂಬಿ ತುಳುಕುತ್ತಿದ್ದ ಕನ್ನಡ ಚಿತ್ರರಂಗ ಇಂದು ಕೇವಲ ಎಡಬಿಡಂಗಿಗಳಿಂದ ತುಂಬಿ ಬಡವಾಗಿದೆ.
ಪ್ರ್ರೀತಿ ಬಗ್ಗೆ ನೀವು ಕೇಳಿದರೆ ಉಪೇಂದ್ರ ಪ್ರೀತಿಯನ್ನ ವರ್ಣಿಸುವ ರೀತಿಯೇ ಬೇರೆ. ನೀವು 'ಶ್' ಚಿತ್ರದ 'ಅವನಲ್ಲಿ ಇವಳಿಲ್ಲಿ' ಹಾಡು, hollywood ಚಿತ್ರದ 'ಪ್ರೇಮ ಪ್ರೇಮ ಪ್ರೇಮ' ಹಾಡು, ಸ್ವಸ್ತಿಕ್ ಚಿತ್ರದ 'ಮಿಂಚು ಹುಳ' ಹಾಡುಗಳು ಅವರ ಪ್ರತಿಭೆಗೆ ಸಾಕ್ಷಿ. ಅರ್ಥಗರ್ಭಿತ ಹಾಡುಗಳೆಂದರೆ ಉಪೇಂದ್ರ ಚಿತ್ರದ 'ಏನಿಲ್ಲ ಏನಿಲ್ಲ', ರಕ್ತಕಣ್ಣೀರು ಚಿತ್ರದ 'danger' ಕಾಡದೆ ಇರಲಾರವು. ಯಾವಾಗಲೂ ವಿಬಿನ್ನ ಸಾಹಿತ್ಯದಿಂದ ಎಲ್ಲರನ್ನೂ ಚಕಿತಗೊಳಿಸುವ ಕೌಶಲ್ಯ ಅವರಿಗೆ ಕರಗತವಾಗಿದೆ.

ಉಪೇಂದ್ರ ಒಬ್ಬ ರಾಜಕಾರಿಣಿಯಾಗಿ :

ನಮ್ಮ ಮನಸ್ಥಿತಿ ಹೇಗಾಗಿದೆ ಎಂದರೆ ಎಲ್ಲರನ್ನ, ಎಲ್ಲವನ್ನ ದೂಷಿಸುತ್ತಾ ಇರುತ್ತೇವೆ. ನಮ್ಮ ಜವಾಬ್ದಾರಿ, ಕರ್ತವ್ಯಗಳನ್ನ ಮರೆತು ಇತರರನ್ನ ಮಾತ್ರಾ ತರಾಟೆಗೆ ತಗೊಳೋದನ್ನ ಅಭ್ಯಾಸ ಮಾಡ್ಕೊಂದಿದ್ದಿವಿ. ಪ್ರತಿನಿತ್ಯ ಕಣ್ಣೆದುರೇ ಅನ್ಯಾಯ ನೆಡಿತಿದ್ರೂ ಅದನ್ನ ಪ್ರತಿಭಟಿಸೋ ಗೋಜಿಗೆ ನಾವು ಹೋಗೋಲ್ಲ, ಅಕ್ರಮ ಮಾಡುತ್ತಿರೋರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಸರ್ವಾದಿಕಾರಿ ತರ ಮೆರೆಯೋರಿಗೆ ಸಲಾಂ ಹೊಡಿಯೋರ ಸಾಲಿನಲ್ಲಿ ನಿಲ್ಲೋದು ಬಿಡೋದಿಲ್ಲ, ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತ ಅನಕ್ಷರಸ್ತರನ್ನ ವಿಧಾನಸೌಧಕ್ಕೆ, ಪಾರ್ಲಿಮೆಂಟ್ಗೆ ಕಳಿಸೋದನ್ನ ಪಾಲಿಸದೆ ಇರೋಲ್ಲ. ಡಾಕ್ಟರ್, ಎಂಜಿನಿಯರ್, ಲಾಯರ್ ಅನ್ನೋ ಮಜಾ ಕೊಡು ಹುದ್ದೆಗಳಿಗೆ ಸೇರ್ಕೊತಿವೆ ಹೊರತು ರಾಜಕೀಯಕ್ಕೆ ಸತ್ತರೂ ಬರೋದಿಲ್ಲ.

ಆದರೆ...

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡು ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲದಿಂದ ರಾಜಕೀಯ ಪ್ರವೇಶ ಮಾಡಿದ ಅನೇಕ ಮಹಾನುಭಾವರಿದ್ದಾರೆ. ಇವರಂತೆಯೇ ಉಪೇಂದ್ರ ಒಂದು ಒಳ್ಳೆ plan, strategy ಗಳೊಂದಿಗೆ ರಾಜಕೀಯ ಪ್ರವೇಶ ಮಾಡಲು ಸನ್ನದ್ಧರಾಗಿದ್ದಾರೆ. ಈತ ರಾಜಕೀಯಕ್ಕೆ ಬಂದ್ರೆ ಏನೂ ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋ ಉಡಾಫೆ ವರ್ತನೆಯನ್ನ ಬಿಟ್ಟು, ರಾಜಕೀಯ ಸರಿ ಇಲ್ಲ, ರಾಜಕಾರಿಣಿಗಳು ಸರಿ ಇಲ್ಲ, ಈ ದೇಶ ಉದ್ಧಾರ ಆಗೋಲ್ಲ ಅನ್ನೋ ಕಟಿಣ ಧೋರಣೆ ತಳೆದಿರುವಂತಹ ಜನರೆಲ್ಲಾ ಮೈ ಕೈ ಕೊಡವಿಕೊಂಡು ಎದ್ದು ಇಂತಹವರ ಬೆಂಬಲಕ್ಕೆ ನಿಲ್ಲಬೇಕಾಗಿದೆ.

ಸರ್ವರ ಬೆಂಬಲ ಉಪೇಂದ್ರರಿಗೆ ಸಿಗಲೆಂಬ ಆಶಯದಿಂದ ಈ ಲೇಖನವನ್ನ ಮುಗಿಸುತ್ತಿದ್ದೇನೆ.

ಬುಧವಾರ, ಆಗಸ್ಟ್ 3, 2011

ಸಾಕಾಗಿದೆ ಗೆಳತಿ

ನಮ್ಮ ಮಾತುಗಳು ಬೆರೆತುಹೋದರೆ
ಮೂಡಿರುವ ಕುತೂಹಲ ಕಡಿಮೆಯಾಗಬಹುದು
ಮೌನದ ಮಜಾ ಮರೆಯಾಗಬಹುದು
ಅವಿತಿರುವ ಭಾವನೆಗಳಿಗೆ ಅರ್ಥ ಬಂದುಬಿಡಬಹುದು
ಆದರೆ,
ಈ ಮೌನ ಸಂಭಾಷಣೆ ಸಾಕಾಗಿದೆ ಗೆಳತಿ
 
ಪರಸ್ಪರ ಪ್ರೀತಿಸುವ ಹೃದಯಗಳು
ಭಾರವಾಗಬಹುದು
ಮರಿ ಹಕ್ಕಿಗೆ ಬಲಿತ ಪುಕ್ಕ ಕೊಟ್ಟ
ಖುಷಿಯ ಅನುಭವವಾಗಬಹುದು
ಕಾಯುವಿಕೆಯಲ್ಲಿರುವ ಸುಖ
ಕಡಿಮೆಯಾಗಬಹುದು
ಆದರೆ,
ಈ ಮೂಕ ಸಂವೇದನೆ ಸಾಕಾಗಿದೆ ಗೆಳತಿ

ಹೊಸ ಸವಾಲುಗಳು
ಸಿಡಿಲಿನಂತೆ ಎರಗಬಹುದು
ಆಪ್ತರ ಆಪದ್ಭಾಂದವರ
ಆಸರೆ ಸಿಗದೇ ಹೋಗಬಹುದು
ಜೊತೆ ಬೆರೆತು ಆನಂದಿಸುವ
ಸ್ವರ್ಗದ ಅನುಭವ ಸುಸ್ತಾಗಿಸಿಬಿಡಬಹುದು
ಆದರೆ,
ಸಹಿಸಲಾಗದ ವೇದನೆ ಸಾಕಾಗಿದೆ ಗೆಳತಿ