ಎಷ್ಟೇ ಹೊದಿಕೆಗಳಿಂದ ಮೈ ಮುಚ್ಚಿಕೊಂಡಿದ್ದರೂ ಏನೋ ಮಿಸ್ಸಿಂಗ್ ಎನ್ನುವಷ್ಟು ಚಳಿ. ದಕ್ಷಿಣ ಭಾರತದ ಕರಾವಳಿ ತೀರವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ 'ನೀಲಂ' ಚಂಡಮಾರುತದ ಪ್ರಭಾವ ಬಹಳ ಜೋರಾಗೇ ಇತ್ತು. ಗಂಟೆ 10 ಆದರೂ ಹಾಸಿಗೆಯಿಂದ ಏಳಲು ಮನಸ್ಸೇ ಇಲ್ಲ. ಹೊಟ್ಟೆ ಚುರ್ ಎಂದಾಗ ಬಲವಂತವಾಗಿ ಏಳಬೇಕಾಯಿತು. ಪಕ್ಕವೇ ಇದ್ದ ಶಾಲೆಯ ಮಕ್ಕಳಿಂದ '59' ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಮಳೆ ಚಳಿಯ ನಡುವೆ ನಡೆಯುತ್ತಿರುವ ಸದ್ದು ಕಿವಿಗಪ್ಪಳಿಸಿತು. ಈ ಬಾರಿಯ ರಾಜ್ಯೋತ್ಸವವನ್ನು ಒಬ್ಬ ಅಪ್ರತಿಮ, ಸಾಹಸಿ ಕನ್ನಡಿಗನ ಕುರಿತ ಲೇಖನದೊಂದಿಗೆ ಆಚರಿಸಬೇಕೆಂದು ಮುಂಚೆಯೇ ನಿರ್ಣಯಿಸಿದ್ದೆ. ಅದಕ್ಕಾಗಿ ಕೆಲ ವಾರಗಳ ಹಿಂದೆಯೇ ಅಂತರ್ಜಾಲದಲ್ಲಿ ಜಾಲಾಡಿದ್ದೆ. ಆಕಸ್ಮಾತಾಗಿ ಅನಂತನಾಗ್ ರು ತಮ್ಮ ತಮ್ಮನ ಬಗ್ಗೆ ಬರೆದ "ನನ್ನ ತಮ್ಮ ಶಂಕರ" ಪುಸ್ತಕ ಕಣ್ಣಿಗೆ ಬಿದ್ದು, ಸಪ್ನ online ನಲ್ಲಿ ಕೊಂಡು, ಪುಸ್ತಕ ಬರುವ ದಿನಕ್ಕಾಗಿ ಕಾದಿದ್ದೆ. ಪುಸ್ತಕದಲ್ಲಿದ್ದ ವಿಷಯಗಳು ಲೇಖನ ಬರೆಯಲು ಇನ್ನಷ್ಟು ಉತ್ತೇಜಿಸಿತು.
1). ಹೌಸಿಂಗ್ ಪ್ರಾಜೆಕ್ಟ್ : prefrabricated sheets ಗಳ ಮೂಲಕ ಮನೆಗಳನ್ನು ಕಟ್ಟಬಹುದಾದ ವಿಧಾನ. ಸುಮಾರು ಐವತ್ತು
ವರ್ಷಗಳು ಬಾಳಬಹುದಾದ ಮನೆಗಳ ನಿರ್ಮಾಣ ಮತ್ತು ನಿರ್ಮಾಣಕ್ಕೆ ತಗಲುವ ವೆಚ್ಚ 1987 ರ ಅವಧಿಗೆ 45000/- ರೂಪಾಯಿಗಳು. ನಾಡಿನ ಹಾಗೂ ನಮ್ಮ ದೇಶದ ಬಡವರಿಗೆ ಅಗ್ಗದ ಮನೆಗಳನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷಿ ಯೋಜನೆ.
2). ಕಂಟ್ರಿ ಕ್ಲಬ್
3). ಮಕ್ಕಳಿಗಾಗಿ ನಂದಿಬೆಟ್ಟದ ತಪ್ಪಲಿನಲ್ಲಿ Amusement Park
4). ನಂದಿಬೆಟ್ಟಕ್ಕೆ rope-way
5). ಕರ್ನಾಟಕದ ಹೆಸರು ಹಾಗೂ ಖ್ಯಾತಿಯನ್ನು ಹೆಚ್ಚಿಸಲು ನಂದಿಬೆಟ್ಟದ ಮತ್ತೊಂದು ಪಕ್ಕದ ಬೆಟ್ಟಕ್ಕೆ ರಸ್ತೆಗಳನ್ನು ಮಾಡಿ ಪಂಚತಾರ ಹೋಟೆಲ್ಲುಗಳ ನಿರ್ಮಾಣದಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಉತ್ಪಾದಿಸುವ ಯೋಜನೆ.
6). ವಿಂಡ್ ಮಿಲ್ಸ್ ಗಳಿಂದ ಅಗ್ಗದ ಇಟ್ಟಿಗೆ ತಯಾರು ಮಾಡುವ ಯೋಜನೆ.
7). ರಾಯಚೂರು ಥರ್ಮಲ್ ವಿದ್ಯುತ್ ಘಟಕದಿಂದ ಉತ್ಪತ್ತಿಯಾಗುವ ಬೂದಿಯಿಂದ ಇಟ್ಟಿಗೆ ತಯಾರಿಸುವ ಯೋಜನೆ.
8). ಸಿದ್ದ ಉಡುಪುಗಳ ತಯಾರಿಕೆಯ ಫ್ಯಾಕ್ಟರಿಗಳ ನಿರ್ಮಾಣ, ತನ್ಮೂಲಕ ಸಹಸ್ರಾರು ಜನರಿಗೆ ಉದ್ಯೋಗ, ಉಡುಪುಗಳ ರಫ್ತು, ವಿದೇಶಿ ವಿನಿಮಯ, ರಾಷ್ಟ್ರೀಯ ಖಜಾನೆಗೆ ಧನ, ತೆರಿಗೆ ರಹಿತ ಆದಾಯ.
9). ಲಂಡನ್ ಮಾದರಿಯಲ್ಲಿ ಬೆಂಗಳೂರಿನಲ್ಲಿ underground ಮೆಟ್ರೋ ರೈಲಿನ ಕಾಮಗಾರಿ.
10). ಸಂಕೇತ್ ಎಲೆಕ್ಟ್ರಾನಿಕ್ಸ್ : ಹಾಡುಗಳ ಧ್ವನಿ ಮುದ್ರಣಕ್ಕೆ ಕನ್ನಡಿಗರು ಮುಂಬೈ, ಚೆನ್ನೈ ಅಲೆಯುತ್ತಿದ್ದಾಗ ಆಗುತ್ತಿದ್ದ ಅವಮಾನಗಳನ್ನು ಕಂಡು ನೊಂದು ಕಟ್ಟಿದ ಸಂಕೇತ್ ಎಲೆಕ್ಟ್ರಾನಿಕ್ಸ್, ಕನ್ನಡಿಗರ ಸ್ವಾಭಿಮಾನದ ಸಂಕೇತ.
Shankarnag is a visionary ಎನ್ನುವುದಕ್ಕೆ ಮೇಲಿನ ಯೋಜನೆಗಳು ಸ್ಯಾಂಪಲ್ ಗಳಷ್ಟೇ. ಒಂದು ಬಡ ಕುಟುಂಬದಲ್ಲಿ ಜನಿಸಿದ ಶಂಕರನಾಗ್ ರ ಬಾಲ್ಯ ಬಹುಪಾಲು ಕಾಸರಗೋಡಿನ ಅನಂದಾಶ್ರಮದಲ್ಲಿ ನಡೆಯುತ್ತದೆ. ಆಶ್ರಮದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಹುದ್ದೆಯನ್ನು ಶಂಕರನಾಗ್ ರ ತಂದೆ ನಿರ್ವಹಿಸುತ್ತಿರುತ್ತಾರೆ. ಆಶ್ರಮದ ಆಚಾರಗಳು, ಕಟ್ಟುಪಾಡುಗಳು ಶಂಕರರ ಮೇಲೆ ಬಹಳ ಪ್ರಭಾವ ಬೀರುತ್ತೆ. ಆಶ್ರಮದ ಗುರುಗಳು ಪ್ರತಿ ರಾತ್ರಿ ತೋರಿಸುತ್ತಿದ್ದ animated ಚಿತ್ರಗಳು ಅವರ ಆಸಕ್ತಿ ನಾಟಕ, ಸಿನೆಮಾಗಳ ಕಡೆಗೆ ಹೊರಳುವಂತೆ ಮಾಡತ್ತೆ.
ಹಲವಾರು ಕಾರಣಗಳ ನಿಮಿತ್ತ ಶಂಕರರ ಕುಟುಂಬ ಮುಂಬೈನಲ್ಲಿ ನೆಲೆ ಕಟ್ಟಿಕೊಳ್ಳಬೇಕಾಗುತ್ತೆ. ಮುಂಬೈಗೆ ಕಾಲಿಟ್ಟಾಗ ಶಂಕರ್ ಗೆ 7 ವರ್ಷ. ಚಿಕ್ಕಂದಿನಿಂದಲೂ ಶಂಕರ್ ಆಶಾವಾದಿ, ಯಾವುದೇ ವಿಷಯದಲ್ಲಾದರೂ complaint, ಹಿಂಜರಿಕೆ ಇರುತ್ತಿರಲಿಲ್ಲ. ಅನಂತನಾಗ್ ತಮ್ಮ ಸ್ನೇಹಿತರನ್ನು ತಮ್ಮ ಪುಟ್ಟ ಮನೆಗೆ ಕರೆ ತರಲು ಹಿಂಜರಿದರೆ, ಶಂಕರ್ ತಮ್ಮ ಶ್ರೀಮಂತ ಸ್ನೇಹಿತರೊಡನೆ ಮನೆಯಲ್ಲಿ ಹರಟುತಿದ್ದರು.
ಮುಂಬೈನಲ್ಲೇ B.Comವರೆಗೂ ಓದಿದ ಶಂಕರ್ ಅಲ್ಲಿನ ಒಂದು ಬ್ಯಾಂಕ್ನಲ್ಲಿ clerk ಆಗಿ ಕೆಲಸ ಪಡಿತಾರೆ. ತಮ್ಮ ಓದಿನ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯ, ನಿರ್ದೇಶನ ಅಡೆ ತಡೆ ಇಲ್ಲದೆ ನಡೀತೀರತ್ತೆ. ಅದಾಗಲೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಅನಂತ್ ರಿಂದ ಚಿತ್ರವೊಂದರಲ್ಲಿ ಅಭಿನಯಿಸಲು ಆಹ್ವಾನ ಬಂದಾಗ, ನಟನೆಗಿಂತ ನಿರ್ದೇಶನದಲ್ಲೇ ನನಗೆ ಆಸಕ್ತಿ ಎಂದು ನಿರಾಕರಿಸುತ್ತಾರೆ. ಆದರೂ ಅಣ್ಣನ ಬಲವಂತಕ್ಕೆ ಗೀರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸಿದ್ದಲ್ಲದೆ, ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡಿತಾರೆ. 1978ರಲ್ಲಿ ತೆರೆಗೆ ಬಂದ ಆ ಚಿತ್ರ ತಾಂತ್ರಿಕವಾಗಿ ಬಹಳ ಗುಣಮಟ್ಟದ್ದಾಗಿ ಮೂಡಿತ್ತು. 24 ರ ಹರೆಯದಲ್ಲೇ ಜೀವ ತುಂಬಿ ಅಭಿನಯಿಸಿದ 'ಗಂಡುಗಲಿ' ಪಾತ್ರ ನಿಜಕ್ಕೂ ಖಡಕ್.
ಶಂಕರರ ಮನೆ ಮಾತು ಕೊಂಕಣಿ, ಮುಂಬೈಗೆ ಹೋದ ನಂತರ ಅವರಿಗೆ ಕನ್ನಡ ಭಾಷೆಯ ನಂಟು ಕಡಿದಾಗಿರುತ್ತೆ. ಆದರೆ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೊಸ್ಕರ ಕನ್ನಡ ಕಲಿತು ಉತ್ತರ ಕರ್ನಾಟಕ ಶೈಲಿಯಲ್ಲಿ ಡಬ್ಬಿಂಗ್ ಮಾಡ್ತಾರೆ. ಮತ್ತೆ ಮುಂಬೈಗೆ ಹಿಂದಿರುಗದೆ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ತಾರೆ.
ಶಂಕರನಾಗ್ ರನ್ನು ಕೇವಲ ಸಿನೆಮಾರಂಗಕ್ಕೆ ಸೀಮಿತಗೊಳಿಸಿದರೆ ಅದು ಅವರಿಗೆ ಮಾಡಬಹುದಾದ ದೊಡ್ಡ ಅವಮಾನವೇ ಸರಿ. ಹಲವಾರು ಯೋಜನೆಗಳನ್ನು ತಲೆ ತುಂಬಾ ತುಂಬಿಕೊಂಡು ಬಹಳ ಉತ್ಸಾಹದಿಂದ ಶಂಕರ್ ಹಗಲು-ರಾತ್ರಿ ದುಡಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನವರು ಬೆರಗಿನಿಂದ ನೋಡುತ್ತಿದ್ದರಂತೆ. ದಿನದಲ್ಲಿ 8 ಗಂಟೆ ಜನ ಮಲಗಿ ಅತ್ಯಮೂಲ್ಯ ವೇಳೆಯನ್ನು ವ್ಯರ್ಥ ಮಾಡ್ತಾರಲಪ್ಪ ಎನ್ನುತ್ತಿದ್ದ ಶಂಕರ್ ಪ್ರಕಾರ ಪ್ರತಿ ನಿಮಿಷವೂ ಅಮೂಲ್ಯ. ಶೂಟಿಂಗ್ ಸ್ಥಳದಿಂದ ಮನೆಗೆ, ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಹೋಗುವಾಗ ಮಾತ್ರ ನಿದ್ರಿಸುತ್ತಾ ಇದ್ದರಂತೆ. ಅವರ ವಾಹನವೇ ಒಂದು ದೊಡ್ಡ ಆಫೀಸ್ನಂತೆ, ಹಲವಾರು ಪ್ರಾಜೆಕ್ಟ್ ಗಳ ರಿಪೋರ್ಟ್ ಗಳು, ಅಧುನಿಕ ಟೆಕ್ನಾಲಜಿಯ ಪುಸ್ತಕಗಳ ರಾಶಿಯೇ ತುಂಬಿರುತ್ತಿತ್ತಂತೆ.
ಅದೆಷ್ಟೇ ಪ್ರಬುದ್ಧ ವ್ಯಕ್ತಿಯಾದರೂ ಅವರು ತೊಡಗಿಸಿಕೊಂಡಿದ್ದ ಪ್ರಾಜೆಕ್ಟ್ ಗಳು, ಸಿನಿಮಾ ನಿರ್ಮಾಣ-ನಿರ್ದೇಶನಗಳಿಂದ ದೊಡ್ಡ ಸಾಲಗಾರನಾಗೇ ಇದ್ದರು. ಸಾಲ ಅವರೆದುರು ಎಂದೂ ಸೋಲಲಿಲ್ಲ. ಏನಾದರೊಂದು ಹೊಸತನ್ನು ಮಾಡುವ ಉತ್ಸಾಹ ಮನದಲ್ಲಿ ಇತ್ತೇ ಹೊರತು, ಹಣದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಬೆಂಗಳೂರು ಮೆಟ್ರೋ ಯೋಜನೆಗೆ ಬೇಕಾದ ವಿಷಯ ಸಂಗ್ರಹಣೆಗೆ ಕರ್ನಾಟಕದ ಆಗಿನ ಮುಖ್ಯಮಂತ್ರಿಯವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದೊಯ್ದು ಅದರ ಸ್ಥೂಲ ಅಧ್ಯಯನ ನಡೆಸಿ, ಬೆಂಗಳೂರಿನಲ್ಲಿ geologist ಗಳಿಂದ ವರದಿ ತರಿಸಿ ಪ್ರಾಜೆಕ್ಟ್ ರಿಪೋರ್ಟ್ ತಯಾರು ಮಾಡಿದ್ದರು. underground railway ಮಾಡಿ ಬೆಂಗಳೂರಿನ ಹಸಿರು ಸಂಪತ್ತನ್ನು ಉಳಿಸಿಕೊಳ್ಳಬೇಕು, ಉದ್ಯಾನನಗರಿ ಎಂಬ ಹೆಸರು ಶಾಶ್ವತವಾಗಿ ಬೆಂಗಳೂರಿಗೆ ಸಲ್ಲಬೇಕು ಎಂಬುದು ಅವರ ಕನಸಾಗಿತ್ತು.
ಶಂಕರನಾಗ್ ನಿರ್ದೇಶಿಸಿದ ಮಿಂಚಿನ ಓಟ, ಆಕ್ಸಿಡೆಂಟ್, ಜನ್ಮ ಜನ್ಮದ ಅನುಬಂಧ, ಗೀತ, ಒಂದು ಮುತ್ತಿನ ಕಥೆ ಮತ್ತೂ ಹಲವು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ಎಲ್ಲವೂ ಹೊಸ ವಿಷಯಗಳು, ತಾಂತ್ರಿಕವಾಗಿಯೂ ಗುಣಮಟ್ಟದ್ದಾಗಿದ್ದವು. ನೆನಪಿರಲಿ ಆಗಿನ್ನೂ ಇಷ್ಟೊಂದು ಕಂಪ್ಯೂಟರೀಕರಣ ಆಗಿರಲಿಲ್ಲ. ಸಿನಿಮಾ ನಿರ್ಮಾಣ ಇಷ್ಟೊಂದು advanced ಆಗಿರಲಿಲ್ಲ. ಜಾಗತೀಕರಣ, ಉದಾರೀಕರಣ, ಉನ್ನತೀಕರಣ, ಕಂಪ್ಯೂಟರೀಕರಣ ಇದ್ಯಾವುದೇ ಕರಣಗಳಿಲ್ಲದ ಕಾಲದಲ್ಲಿ ಅದ್ಭುತಗಳನ್ನು ಸೃಷ್ಟಿಸುವ ತಾಕತ್ತು ಶಂಕರ್ ಗಿತ್ತು.
ಗೋಕಾಕ್ ಚಳುವಳಿಯನ್ನು ಮುನ್ನಡೆಸಿದ್ದ ರಾಜ್ ರ ಜೊತೆ ಉತ್ಸುಕರಾಗಿ ಶಂಕರ್ ಭಾಗವಹಿಸಿದ್ದರು. ರಾಜ್ ಹಾಗೂ ಶಂಕರ್ ನಡುವಿನ ಸೌಹಾರ್ಧ ಸಂಬಂದಕ್ಕೆ 'ಒಂದು ಮುತ್ತಿನ ಕಥೆ' ಚಿತ್ರವೇ ಸಾಕ್ಷಿ. ಶಂಕರ್ ಸಾವಿಗೂ ರಾಜ್ ಗೂ ಸಂಬಂಧ ಕಟ್ಟಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು ಜನಗಳ ಕೆಟ್ಟ ಮನಸ್ಥಿಗೆ ಸಾಕ್ಷಿ. ಆರ್.ಕೆ. ನಾರಾಯಣ್ ರ 'ಸ್ವಾಮಿ ಅಂಡ್ ಫ್ರೆಂಡ್ಸ್' ಕಥೆ 'ಮಾಲ್ಗುಡಿ ಡೇಸ್' ಧಾರಾವಾಹಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದು ಶಂಕರರ brilliance ಗೆ ನಿದರ್ಶನ. ಶಂಕರರ brilliance, ಅದರಿಂದ ಬಂದ ಫೇಮ್ ಆ ಭಗವಂತನಿಗೂ ಅಸೂಯೆ ಆಯ್ತು ಅನ್ಸುತ್ತೆ.
ಶಂಕರನಾಗ್ ಚಿತ್ರರಂಗಕ್ಕೆ ಬಂದು ಕೇವಲ 12 ವರ್ಷ ಆಗಿತ್ತು ಅಷ್ಟೇ. ಅಷ್ಟಕ್ಕಾಗಲೇ ಕರ್ನಾಟಕದಾದ್ಯಂತ ಹೆಸರಾಗಿದ್ದರು. ಒಬ್ಬ ಪ್ರಬುದ್ಧ ಚಿಂತಕ, ಚಿತ್ರ ನಿರ್ದೇಶಕ, ಚಳುವಳಿಗಾರ, ಹೊಸ ಯೋಜನೆಗಳ ಹರಿಕಾರ, ನಾಟಕಕಾರ, ಸಮಾಜಮುಖಿ
ಈ ನಾಡಿನ ದುರಂತ ಅಲ್ಪಾಯುಶಿಯಾಗಬೇಕಾಯಿತು. ಒಂದು ಹೊಸ ಚಿತ್ರದ ಮಾತುಕತೆಗೆಂದು ದಾವಣಗೆರೆಗೆ
ನಡುರಾತ್ರಿಯಲ್ಲಿ ಕಾರಿನಲ್ಲಿ ಹೊರಟಾಗ ನಸುಕಿನಲ್ಲಿ ಭೀಕರ ಅಪಘಾತಕ್ಕೊಳಗಾಗಿ ಸಾವನ್ನಪ್ಪುತ್ತಾರೆ.
ಶಂಕರನಾಗ್ ಇಂದು ಇದ್ದಿದ್ದರೆ ಖಂಡಿತ ಕನ್ನಡ ಚಿತ್ರರಂಗ ಈ ರೀತಿ ಬಳಲುತ್ತಿರಲಿಲ್ಲ. ಇಷ್ಟು ಮಲಿನಯುಕ್ತವಾಗುತ್ತಿರಲಿಲ್ಲ. ಕರ್ನಾಟಕವಲ್ಲದೆ ಇಡೀ ಭಾರತ ಹೆಮ್ಮೆ ಪಡುವ ಚಿತ್ರಗಳು, ಸಮಾಜಮುಖಿ ಯೋಜನೆಗಳು ಬೆಳಕಿಗೆ ಬರುತ್ತಿದ್ದಂತು ಖಂಡಿತ.
ಅರುಂದತಿ ನಾಗ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು, "ಶಂಕರನಾಗ್ ಇಲ್ಲದೆ ನನಗಾಗಿರುವ ವೈಯಕ್ತಿಕ ನಷ್ಟ ತುಂಬಲಾಗದ್ದು. ಆದರೆ ಇಡೀ ಕರ್ನಾಟಕಕ್ಕೆ ಭಾರತಕ್ಕೆ ಅವನ ಸಾವು ಬಹಳ ದೊಡ್ಡ ನಷ್ಟ. ಹಲವಾರು ಯೋಜನೆಗಳ ಸಾಕಾರಕ್ಕೆ ಹಗಲುರಾತ್ರಿ ದುಡಿಯುತ್ತಿದ್ದ, ಬಾಯ್ಬಿಟ್ಟರೆ ಹೊಸತನ್ನು ಮಾತಾಡುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡದ್ದು ಈ ನಾಡಿನ ದೊಡ್ಡ ದುರದೃಷ್ಟ."
ದೇಶ ಕಟ್ಟಲು ದುಡಿದ, ಹಿಂದೂ ಧರ್ಮದ ಸತ್ವವನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದ, ಸಾವಿಗೆ ಕಿಂಚಿತ್ತೂ
ಹೆದರದೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ದೇಶ ಪ್ರೇಮಿ ಭಗತ್ ಸಿಂಗ್, ಅತ್ಯಂತ ಕಡು ಬಡತನದ ಬದುಕು ಸವೆಸಿದ್ದರೂ ಗಣಿತಶಾಸ್ತ್ರದಲ್ಲಿ ಬ್ರಿಲಿಯಂಟ್ ಆಗಿದ್ದ ಶ್ರೀನಿವಾಸ ರಾಮಾನುಜನ್ ಮತ್ತೂ ಹಲವರಂತೆ, ಶಂಕರನಾಗ್
ಅಲ್ಪಾಯುಶಿಯಾದದ್ದನ್ನು ನೋಡಿದರೆ ಆ ಭಗವಂತನ ಅಸ್ತಿತ್ವದ ಬಗ್ಗೆ ಸಂಶಯ ಮೂಡುತ್ತೆ. ಆ ಸಂಶಯ ನಿಜವಾಗದೆ
ಮತ್ತೆ ಹುಟ್ಟಿ ಬರಲಿ ಶಂಕರನಾಗ್.