ನನ್ನ PUC ಹಾಗೂ BE ದಿನಗಳಲ್ಲಿ ನಾನಾಗೇ ಬರೆದ, ಕೆಲವರು ಮತ್ತೆ ಕೆಲವು ಸಂದರ್ಭಗಳು ಬರೆಸಿದ ಕವನಗಳನ್ನ ಇಲ್ಲಿ ಬರೆದಿದ್ದೇನೆ. silly ಎಂದೆನಿಸುವ ಕವನಗಳನ್ನ ಬರೆದು ಓದುಗರಿಗೆ ಹೊರೆ ಮಾಡಬಾರದೆಂದು ಕೆಲವನ್ನ ಮಾತ್ರ ಇಲ್ಲಿ ಬರೆದಿದ್ದೇನೆ. ಇಷ್ಟವಾದ್ರೆ ಒಂದು comment ಹಾಕಿ ಇಲ್ಲವಾದರೆ ಕತ್ತನ್ನ ಮೇಲೆತ್ತಿ ಉಗಿಯಿರಿ.. :)
ಕವನ ೧ : ಬರಬೇಕು ನೀ ಬರಬೇಕು
ಕತ್ತಲೆಯ ಮೋಡಗಳು ಕಂಗಳಿಗೆ ಕಂಡಾಗ
ಹೃದಯದ ನೋವುಗಳು ಮನೆ ಮಾಡಿ ಮೆರೆದಾಗ
ಪ್ರೀತಿಸುವ ಕೈಗಳು ಸಂಶಯದಿ ಸರಿದಾಗ
ಬರಬೇಕು ನನ್ನೊಡನೆ ನೀನಿರಬೇಕು
ಒಲವಿನ ಆಸೆಗಳು ಓರೆಯಾಗಿ ಹೋದಾಗ
ಚೆಲುವಿನ ನೆನಪುಗಳು ಘಾಡವಾದಾಗ
ನನ್ನೆಲ್ಲ ದಿನಗಳು ನಿನಗಾಗಿ ಕಾದಿರುವಾಗ
ಬರಬೇಕು ಪ್ರೀತಿ ಒಲುಮೆ ಹರಿಸಬೇಕು
ನಿನ್ನಯ ಸಂಗಡಕೆ ಕಾಯುತ್ತಾ ಕರೆದಾಗ
ರಹಸ್ಯಗಳ ಆಗರದಿ ನಾ ಬದುಕಿರುವಾಗ
ನೈಜ ಹಾದಿಗಳ ನಾ ಮರೆತಿರುವಾಗ
ಬರಬೇಕು ಕೈಹಿಡಿದು ನಡೆಸಬೇಕು
ಕವನ ೨ : ಹೀಗೇಕೆ
ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಬೆಳದಿಂಗಳ ಬೆಳಕೇಕೆ ?
ಸವಿಯುವ ಮನಸಿಲ್ಲದಿದ್ದರೆ !!
ಗುಂಪಿನ ಜೊತೆಗಾರರೇಕೆ ?
ಭಾವನೆಗಳೇ ಇಲ್ಲದಿದ್ದರೆ !!
ಚೆಲುವೆಯ ಚೆಲುವೇಕೆ ?
ರಸಿಕನಲ್ಲದಿದ್ದರೆ !!
ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಸಾಮರಸ್ಯದ ಜೀವನ ನಡೆಸದಿದ್ದರೆ !!
ಶಿಖರದೆತ್ತರದ ಗುರಿ ಏಕೆ ?
ಗುರಿಕಾರನಲ್ಲದಿದ್ದರೆ !!
ಸಾಧನೆಗಳತ್ತ ಗಮನ ಬರುವುದು ಹೇಗೆ ?
ಸಾಧಿಸುವ ಮನಸಿಲ್ಲದಿದ್ದರೆ !!
ಆಶಾಭಾವನೆ ಮೂಡುವುದು ಹೇಗೆ ?
ಮನದಲ್ಲಿ ಪ್ರೀತಿ ಇಲ್ಲದಿದ್ದರೆ !!
ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಸ್ನೇಹ ಆದರಗಳು ಅರ್ಥವಾಗದಿದ್ದರೆ !!
ಕವನ ೩ : ನೆನಪಿರಲಿ
ಎಂಜಿನಿಯರಿಂಗ್ ನ ಮೊದಲ ವರ್ಷ ಮುಗಿಸಿದ ಸಂಭ್ರಮದಲ್ಲಿ ಒಂದು ಸಣ್ಣ ಕಾರ್ಯಕ್ರಮ ನಡೆಸಲಾಗಿತ್ತು. ಊಟಕ್ಕಾಗಿ ಮನೆಗೆ ಬಂದ ನನಗೆ ಹೊಳೆದ ಕೆಲ ಪದಗಳನ್ನ ಪೋಣಿಸಿ ಅಂದು ಓದಿದ್ದೆ. ಮೊದಲಿಗೆ ನಾವು ಹೊಸತನ್ನ ಅನುಭವಿಸಿದಾಗ ಅದರಲ್ಲಿ ಸಿಗುವ ಆನಂದ ಅಮೋಘ. ಮೊದಲ ವರ್ಷದ BE ಅನುಭವಗಳೂ ಹಾಗೆ. ಓದುಗರಿಗೂ ತಂತಮ್ಮ ಮೊದಲ ವರುಷದ ನೆನಪುಗಳು ಮೂಡಬಹುದು ಎಂಬ ಭರವಸೆಯೊಂದಿಗೆ ಸಾಲುಗಳು..
ಕಳೆದುಹೋಯ್ತು ಎಂಜಿನಿಯರಿಂಗ್ ನ ಮೊದಲ ವರುಷ
ನೆಲೆ ನಿಂತಿದೆ ಎಲ್ಲರಲಿ ವರುಷದ ಹರುಷ
ಕಳೆದ ವರುಷದ ನೆನಪುಗಳೆಷ್ಟೋ, ನೋವುಗಳೆಷ್ಟೋ, ದುಖಗಳೆಷ್ಟೋ
ನೆನಪಿರಲಿ ಈ ವರುಷ ಎಲ್ಲರ ಜೊತೆ ಬೆರೆತ ಮೊದಲ ವರುಷ
ಕ್ಯಾಂಪಸ್ ನ thunder ಸ್ಪಾಟ್ಗಳು
ಕ್ಲಾಸ್ ರೂಂ ನ dayhot ತಮಾಷೆಗಳು
ಲೆಕ್ಚುರೆರ್ ಗಳ ಸಿಡುಕು ನೋಟಗಳು
auditorium ನ ಜೋರು ಜೋರು ಕೂಗುಗಳು
ಕಾಲೇಜಿನ colourful ಬೆಡಗಿಯರು
ನೆನಪಿರಲಿ ಈ ಹರುಷ ಎಲ್ಲರೂ ಖುಷಿಪಟ್ಟ ಮೊದಲ ವರುಷ
ಕ್ಯಾಂಟಿನಿನ queue ತಿಂಡಿಗಳು
toilet ನಲ್ಲಿನ ನಗುಸುರಿಸೋ ಬರಹಗಳು
Reading hall ನ ಸುಂದರ ಸನ್ನಿವೇಶಗಳು
ಫಲಿತಾಂಶದ ಕಹಿ ಘಟನೆಗಳು
ನೆನಪಿರಲಿ ಈ ವರುಷ ನಮ್ಮೆಲರ ಸೇರಿಸಿದ ಮೊದಲ ವರುಷ !!
ಕವನ ೪ : ಮನಸ್ಸು
ಮನಸ್ಸಿನ ಕೆಲ ಆಯಾಮಗಳನ್ನ ಈ ಕವನದಲ್ಲಿ ಹೇಳಿದ್ದೇನೆ. ಹೀಗೆ ಬರೆಯುತ್ತಾ ಹೋದರೆ ಪುಟಗಳನ್ನೂ ಮೀರುವಷ್ಟು ಮನಸ್ಸಿನ್ನ ವಿವಿಧ ಆಯಾಮಗಳು ಕಣ್ಣೆದುರಿಗೆ ಬರುತ್ತವೆ..
ಮನಸೇ ಓ ಮೃಧುಲ ಮನಸೇ
ಕಾಣದಿರುವ ಸೊಗಸುಗಳನು ಇತ್ತ ಮನಸೇ
ಬಯಕೆಗಳನು ಬೆಳೆಸಿರುವ ಸ್ವಾರ್ಥ ಮನಸೇ
ಈಡೇರಿಸದೇ ಕಾಯಿಸುತಿರುವ ಕಳ್ಳ ಮನಸೇ
ಮನಸೇ ಓ ಕಠಿಣ ಮನಸೇ
ಬಗ್ಗದೆ ಬಳುಕದೆ ನಿಂತ ಮನಸೇ
ದೃಢತೆಯಲಿ ಶಿಖರ ಮುಟ್ಟಿದ ಮನಸೇ
ದಿಟ್ಟತೆಯಲಿ ದಡ ಸೇರಿಸದ ಮನಸೇ
ಮನಸೇ ಓ ನಿಜ ಮನಸೇ
ಸ್ನೇಹ ಪ್ರೀತಿಗಳ ಬಿತ್ತಿದ ಮನಸೇ
ಗುರಿ ಆಕಾಂಕ್ಷೆಗಳ ಬೆಳೆಸಿದ ಮನಸೇ
ಸಾಧನೆಗೆ ಸಿಡಿದೇಳಿಸಿದ ಸ್ಫೂರ್ತಿ ಮನಸೇ
ಮನಸೇ ಓ ಸುಳ್ಳು ಮನಸೇ
ಅಸೂಯೆ ಅಹಂಕಾರದ ಪ್ರತಿರೂಪ ಮನಸೇ
ಮೋಹ ಮತ್ಸರಕೆ ಬಗ್ಗುವ ಮನಸೇ
ಮರುಗಿಸಿ ಕೊರಗಿಸೋ ಪಿಶಾಚಿ ಮನಸೇ
ಕವನ ೫ : (ಶೀರ್ಷಿಕೆ ನೀವೇ ಇಡಿ)
ಸರಿಯುತಿದೆ ಸಂತಸದ ದಿನಗಳು
ಮುಸ್ಸಂಜೆಯ ಮಗ್ಗಲಿಗೆ
ಹರಿಯುತಿದೆ ಕತ್ತಲೆಯ ಕಾವು
ಬೆಳಕ ಕಂಡ ಕಂಗಳಿಗೆ
ನವ ಆಮಂತ್ರಣಕೆ ಸಜ್ಜಾಗುತಲಿದೆ
ಅಂಜಿಕೆ ಹೊತ್ತ ಮನವು
ಜಗದ ಭಾರವೇ ಹೊರಬೇಕೆನ್ನುವಂತೆ
ಅನಿಸುತಲಿದೆ ಮನಕೆ
ದೂರ ತೀರ ಯಾನ, ಸುಂದರ ತಾಣದ
ಆಸೆಯಿದೆ ಮೂಲೆಯಲಿ
ಕ್ರಮಿಸಬೇಕಾದ ದೂರ, ಕರಗತವಾದ ಪಾಠ
ಜೊತೆಯಲಿದೆ ನನ್ನಲ್ಲಿ
ಎತ್ತರವಾದ ಶಿಖರ, ಉದ್ದದ ನದಿ, ಆಳದ ಸಾಗರ
ನೀಡುತಲಿವೆ ಉತ್ಸಾಹ
ಬರಲಿ ಜಗವೆದುರಿಸುವ ಸವಾಲುಗಳು
ಎದುರಿಸೋಣ ಎಲ್ಲರೂ
ಕವನ ೬ : ತ್ಯಾಗಮಯಿ
ನನ್ನ ತಂದೆ ತನ್ನೆಲ್ಲ ಸುಖವನ್ನ ಮರೆತು ನಮ್ಮ ಅಭ್ಯುದಯದಲ್ಲೇ ಅವರ ಜೀವನ ಕಳೆದಿದ್ದನ್ನ ನನ್ನ ಕಣ್ಣುಗಳಲ್ಲಿ
ತುಂಬಿಕೊಂಡು ನಾ ಬರೆದ ಕವನ, ಸ್ವಲ್ಪ sentiment ಇದೆ adjust ಮಾಡ್ಕೊಳ್ಳಿ..
ಹೇ ತ್ಯಾಗಮೂರ್ತಿಯೇ ನಿನಗೆ ನನ್ನ ನಮಸ್ಕಾರ
ಸಲ್ಲಿಸಬೇಕು ಎಲ್ಲರೂ ನಿನಗೆ ಮನತುಂಬಿದ ಪುರಸ್ಕಾರ
ದುಡಿಯುವೆ ನಮಗಾಗಿ ಈ ಸ್ವಾರ್ಥದ ಜಗತ್ತಿನಲ್ಲಿ
ಗಳಿಸಿರುವೆ ಉತ್ತಮ ಸ್ಥಾನ ನಮ್ಮ ಮನದಲ್ಲಿ
ಬೆಳೆದೆ ನೀ ತಂದೆ ತಾಯಿ ಹೆಮ್ಮೆಪಡುವ ಮಗನಾಗಿ
ಹಂಚಿದೆ ನಿನ್ನ ಸುಖವನ್ನ ಒಡಹುಟ್ಟಿದವರ ಉನ್ನತಿಗಾಗಿ
ಪ್ರೀತಿ ತುಂಬಿದ ಕಣ್ಣುಗಳಲ್ಲಿ ಕಂಡೆ ನಿನ್ನಾಕೆಯನ್ನ
ಅದಕ್ಕಾಗಿ ಕಷ್ಟಪಟ್ಟೆ ಪ್ರತಿದಿನ
ಮಕ್ಕಳಿಗಾಗಿ ಮೀಸಲಿಟ್ಟೆ ನಿನ್ನ ದುಡಿಮೆಯ ಫಲ
ಅವರ ಅಭ್ಯುದಯದಲ್ಲಿ ಬಿಡಲಿಲ್ಲ ನಿನ್ನ ಛಲ
ಸ್ವೀಕರಿಸುವೆಯಲ್ಲಾ ಕಷ್ಟಗಳನ್ನ ನಗುನಗುತ್ತಲೇ
ನೆನಪಿಸುವೆ ಅವುಗಳನ್ನ ಮುಗುಳ್ನಗುತ್ತಲೇ
ನಾ ಬೇಡುವೆ ನಿನ್ನ ಕಷ್ಟದಲ್ಲಿ ಸ್ವಲ್ಪ ಭಾಗ
ನನಗೂ ಬೇಕು ನಿನ್ನ ಹೃದಯದಲ್ಲಿ ಕೊಂಚ ಜಾಗ
ಸ್ನೇಹಿತನಾಗಿ ಬೆಳೆಸಿದೆ ನಮ್ಮನ್ನ
ಮರೆಯದಂತೆ ಮಾಡಿದೆ ನಿನ್ನ ಅಂತರಂಗವನ್ನ
ಉಳಿಸಿದೆ ನಿನ್ನೆಸರ ನಮ್ಮೆದೆಯ ಮಿಡಿತದಲ್ಲಿ
ಬರೆಸಿದೆ ನಮ್ಮ ಹಣೆ ಬರಹವನ್ನ ಸುಖದ ಹಾದಿಯಲ್ಲಿ
ಸ್ವಲ್ಪ ದೂರವಾದರೆ ಕಾಡುತ್ತದೆ ನಿನ್ನ ನೆನಪು
ಹತ್ತಿರವಿದ್ದರೆ ಬಡಿದೆಬ್ಬಿಸುತ್ತದೆ ಸಾಧನೆಯ ತುಣುಕು
ಕಣ್ಣಿನಿಂದಲೇ ತಿಳಿಸುವೆ ನಿನ್ನ ಅಂತರಂಗದ ನುಡಿ
ಮಾದರಿಯಾದೆ ಇತರರಿಗೆ ಅವರ ಮನಸ್ಸನ್ನ ಕಾಡಿ
ಹೇ ತ್ಯಾಗಮೂರ್ತಿಯೇ ನಿನಗೆ ನನ್ನ ನಮಸ್ಕಾರ
ಸಲ್ಲಿಸಲೇಬೇಕು ಎಲ್ಲರೂ ನಿನಗೆ ಮನತುಂಬಿದ ಪುರಸ್ಕಾರ
ಕವನ ೭ : ಭಾವುಕ
ನಾನೊಬ್ಬ ಭಾವುಕ ಎಲ್ಲವನ್ನು ಸಹಿಸುವ ಸೇವಕ
ಕೆಲವೊಮ್ಮೆ ಮನಸ್ಸಿಗೆ ನೋವಾದಾಗಲೂ
ಸುಖದ ಹಾದಿಯ ಸವಿ ತಿಂದಾಗಲೂ
ನಾನಾಗುವೆ ಭಾವುಕ ಈ ಜೀವನದ ಸುತ್ತಾ, ಪ್ರತಿನಿತ್ಯ
ಏಕೆ ಹೀಗೆಂದು ಪ್ರಶ್ನಿಸ ಹೊರಡುವೆ
ಉತ್ತರ ಸಿಗದೇ ಕೊರಗುತಲಿರುವೆ
ಒಮ್ಮೊಮ್ಮೆ ಭಾವುಕತೆಯಲ್ಲಿ ಬಂದಿಸಲ್ಪಡುವೆ
ಭಾರಿ ಭಾರಿ ನಾನಾಗಿಯೇ ಬಿಡುಗಡೆ ಪಡುವೆ
ನಾನಾಗುವೆ ಭಾವುಕ ಯೋಚಿಸುತ್ತಾ, ಮರುಗುತ್ತಾ, ಕೊರಗುತ್ತಾ
ಅಂತರಾಳದ ಸತ್ಯಗಳು ಮುದುಡಿಕೊಂಡಾಗ
ನೈಜ ಘಟನೆಗಳು ತಿಳಿದುಹೋದಾಗ
ಮಮತೆ, ಸ್ನೇಹ, ಪ್ರೀತಿ ಅರ್ಥಹೀನವಾದಾಗ
ನಾನಾಗುವೆ ಭಾವುಕ ಮನಸು ಮಗುವಾದಾಗ, ಸಲಹುವವರು ಸಿಗದಾಗ
ಕವನ ೮ : ಹೋಗಿ ಬಾ ಗೆಳೆಯ
ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದ ಗೆಳೆಯರೊಬ್ಬರಿದ್ದಾರೆ. ನನ್ನಲ್ಲಾದ ಸಾಕಷ್ಟು ಬದಲಾವಣೆಗಳಿಗೆ ಅವರೇ ಕಾರಣ. ಅವರೊಂದಿಗೆ ನಾ ಕಳೆದ ಪ್ರತಿ ಕ್ಷಣ ಅಮೂಲ್ಯ, ಎಲ್ಲಾ ಕಲಿಕೆಯ ಕ್ಷಣ. ನನ್ನ ಪಾಲಿಗೆ ಅವರೇ ಗುರು. PUC ಯಲ್ಲಿ ಹಾಸ್ಟೆಲ್ ನಲ್ಲಿದ್ದಾಗ ಅವರ ಜೊತೆ ಬೆರೆಯುವ ಅವಕಾಶ ಸಿಕ್ಕಿತ್ತು. ಅವರು second year PUC ಮುಗಿಸಿದ ನಂತರ ಊರಿಗೆ ಹೊರಟ ಸಂದರ್ಭದಲ್ಲಿ ನನ್ನಲ್ಲಿ ಮೂಡಿದ ಶುಭ ಹಾರೈಕೆಯ ಕವನ ಹೀಗಿದೆ..
ಹೋಗಿ ಬಾ ಗೆಳೆಯ ಹೋಗಿ ಬಾ
ಹೋಗುವಾಗ ಮರೆಯದೆ ಒಯ್ಯಿ
ಇಲ್ಲಿನ ಎಲ್ಲಾ ನೆನಪುಗಳನ್ನ
ಹೊರೆಯಾದವೆಂದು ಕಟಿಣ ಧೋರಣೆಯ
ತಾಳದಿರು, ಹೊತ್ತೊಯ್ದರೆ ಸವಿಯಾದ
ನೆನಪುಗಳಾಗಿ ಕಾಡಬಹುದು
ಪ್ರತಿ ಹಂತಗಳ ಬದಲಾವಣೆಗಳು
ಹೊರಬೇಕಾದ ಜವಾಬ್ದಾರಿಗಳು
ಕಾಡುತ್ತಲಿರುತ್ತವೆ ನೆರಳಂತೆ
ಈ ಹಂತದವರೆಗೂ ಸಹಕರಿಸಿದವರನ್ನ ನೆನೆಸಿ
ಬೆಳಕ ಕೊಡುವ ಬದುಕ ನಡೆಸಿ
ಎಲ್ಲರ ಕ್ಷೇಮಕ್ಕೆ ಅದನ್ನ ಸವೆಸಿ
ದಿನಗಳ ಕಳೆಯುವುದು ಸ್ಪೂರ್ತಿದಾಯಕ
ಹಳೆಯ ಹರುಷದೊಂದಿಗೆ, ಹೊಸ ಹುರುಪಿನೊಂದಿಗೆ
ಸಾಧಿಸಿದ ಸಾರ್ಥಕತೆಯೊಂದಿಗೆ
ಸಾಗುತಿರಲಿ ನಿನ್ನ ಯಶಸ್ಸಿನ ಜೀವನ
ಹೋಗಿ ಬಾ ಗೆಳೆಯ ಹೋಗಿ ಬಾ
ಕವನ ೯ : ನಟಸಾರ್ವಭೌಮ
ಒಬ್ಬ ಅಪ್ಪಟ ಕನ್ನಡಿಗನಾಗಿ ರಾಜಕುಮಾರ್ ಚಿತ್ರಗಳನ್ನ ನೋಡದೆ, ಅನಂದಿಸದೆ, ಅಸ್ವಾದಿಸದೆ ಇರಲು ಸಾಧ್ಯವೇ ಇಲ್ಲ.
ಒಬ್ಬ ಸಾಮಾನ್ಯ ಮನುಷ್ಯ ಅಸಮಾನ್ಯವಾದುದನ್ನು ಸಾದಿಸಬಹುದು ಎಂಬುದಕ್ಕೆ ಒಂದು ಉದಾಹರಣೆ ರಾಜಕುಮಾರ್. ಒಬ್ಬ ಸಿನಿಮಾ ನಟ ಎಂಬುದಕ್ಕಿಂತ ಅವರೊಬ್ಬ ಜನಪದ ವ್ಯಕ್ತಿ. ಜನಸಾಮಾನ್ಯರ ಜೀವನಕ್ಕೆ ಹತ್ತಿರವಾದ ಸಿನೆಮಾಗಳಲ್ಲಿ ನಟಿಸಿ ಪ್ರೇರೇಪಿಸಿದ ಮಹಾನ್ ನಟ. ಸಮಯ ಇದ್ದಾಗ ಅವರ ಬಗ್ಗೆ ಒಂದು ಲೇಖನ ಬರೆಯುವೆ.. ಈಗ ಅವರ ಬಗ್ಗೆ ನಾ ಬರೆದ ಒಂದು ಕವನ ಇಲ್ಲಿದೆ ಓದ್ಕೊಳ್ಳಿ...
ನಾಟಕ ಕಳೆಯನ್ನ ಸರ್ವಸ್ವ ಎಂದು ಬೆಳೆದು
ಬದುಕ ತಿಳಿಸೋ ದಾರಿಯಲಿ ನಡೆದು
ಹಾಡುಗಳಿಗೆ ಇಂಪನ್ನು ಪೊರೆದು
ಮಾತುಗಳಲ್ಲೇ ಕನ್ನಡ ಕಂಪನ್ನ ಹರಿಸಿದ
ನಿಮಗೆ ನಮನಗಳು ಹೃದಯಪೂರ್ವಕ ನಮನಗಳು
ಶಿಲೆಗಳೆಂಬ ಪಾತ್ರಗಳಿಗೆ ಜೀವ ಕೊಟ್ಟು
ಜೀವನೋತ್ಸಾಹವನ್ನು ಅಭಿನಯದಿ ಇಟ್ಟು
ನೋಡುಗರ ಹೃದಯಗಳನ್ನ ಆಕ್ರಮಿಸುವಷ್ಟು
ಸರ್ವರನ್ನು ಸಂತೃಪ್ತಿಪಡಿಸಲು ಸಫಲರಾದ
ನಿಮಗೆ ನಮನಗಳು ಪ್ರೀತಿಪೂರ್ವಕ ನಮನಗಳು
ತಾಳ್ಮೆಯ, ತ್ಯಾಗದ, ಗಂಭೀರದ
ಭಕ್ತಿಪೂರ್ವಕವಾದ, ಶಾಂತಸ್ವರೂಪಿಯಾದ
ಏರುಸ್ತಾಯಿ ಕಂಟದ, ಆಕ್ರಮಣಕಾರಿ ಮಾತುಗಳ
ಸುಂದರ ಮುಕಾರವಿಂದದ, ಉತ್ಪ್ರೇಕ್ಷೆಗೆ ನಿಲುಕದ
ನಿಮಗೆ ನಮನಗಳು ಭಕ್ತಿಪೂರ್ವಕ ನಮನಗಳು
ಪೌರಾಣಿಕ ಪಾತ್ರಗಳಂತೂ ಸಾರಿದವು ಕನ್ನಡ ಸಂಸ್ಕೃತಿ
ಸಾಮಾಜಿಕ ಪಾತ್ರಗಳು ತಿಳಿಸಿದವು ಜೀವನದ ಇತಿ ಮಿತಿ
ಇತಿಹಾಸಾದಾರಿತ ಪಾತ್ರಗಳು ಹೆಚ್ಚಿಸಿದವು ಕನ್ನಡ ಭಕುತಿ
ಹಾಡಿದ ಹಾಡುಗಳು ಗಳಿಸಿಕೊಂಡವು ಶಾಶ್ವತ ನೆಲೆಯನ್ನ
ನಮನಗಳು ಪ್ರಚಂಡ ಸಾಧಕನಿಗೆ ಶರಣಾಗತರೆಲ್ಲರ ನಮನಗಳು
ಕವನ ೧೦ : ಕವಿಯಾದೆ
ಕವಿಯಾದೆ ಓ ಚೆಲುವೆ ನಿನ್ನಿಂದ ನಾ ಕವಿಯಾದೆ
ನಿನ್ನಂದವ ವರ್ಣಿಸಲೆಂದೇ ನಾ ಕವಿಯಾದೆ
ನಿನ ಚಂದವ ಸವಿಯಲೆಂದೇ ನಾ ಹೀಗಾದೆ
ಕವಿಯದೆ ಓ ಸ್ಪೂರ್ತಿಯೇ ನಿನ್ನಿಂದ ನಾ ಕವಿಯಾದೆ
ಕನಸುಗಳಲಿ ನೀ ಬಂದು ಹೋದಾಗ
ಮೆತ್ತನೆ ತಿಳಿಯದೆ ಮುತ್ತನಿಟ್ಟಾಗ
ನೂರಾರು ಆಸೆಗಳನು ಹೊಮ್ಮಿಸಿದಾಗ
ನನಗೆ ತಿಳಿಯದಂತೆ ನಾ ಕವಿಯಾದೆ
ನಿನ್ನ ರೂಪವ ಬಂನಿಸಲೆಂದೇ ನಾ ಹೀಗಾದೆ
ಹೃದಯದ ಗೂಡಲ್ಲಿ ನೀ ಅವಿತಾಗ
ಒಂದೊಂದು ಕೂಗಿಗೂ ಕುಲುಕಿದಾಗ
ಆಸರೆಯಾಸೆಯಲ್ಲಿ ಮುಳುಗಿ ಹೋದಾಗ
ಮೂಕ ನಗು ಸುರಿಸುತ್ತಾ ಕವಿಯಾದೆ
ನಿನ್ನ ಸೆಳೆತದೆ ಸೋತು ನಾ ಹೀಗಾದೆ
ನನ್ನೆದುರು ಬಂದಾಗ ಪಕ್ಕದಿ ನಿಂತಾಗ
ನನ್ನ ಭಾವನೆಗಳಿಗೆ ಜೀವ ಬಂದಾಗ
ಎಲ್ಲ ಚಲನವಲನದಲ್ಲೂ ನೀ ತುಂಬಿದಾಗ
ಕಲ್ಪನೆಗಳ ಆಗರದಲ್ಲಿ ಕವಿಯಾದೆ
ಪರಸ್ಪರ ಮಾತನಾಡಲು ನಾ ಹೀಗಾದೆ
ಕವನ ೫ ರ ಶೀರ್ಷಿಕೆ "ಬೆಳಕು" ಇದ್ದಲ್ಲಿ ಚೆನ್ನಾಗಿರುತ್ತೆ.
ಪ್ರತ್ಯುತ್ತರಅಳಿಸಿಎಲ್ಲ ಕವನಗಳು ಅರ್ಥಗರ್ಭಿತವಾಗಿದೆ. ನಿನ್ನ ಮನದ ಮಾತನ್ನು ಹಾಗೆಯೇ ಹಾಳೆಯ ಮೇಲೆ ಗೀಚಿಟ್ಟಂತೆ.
ನೀನೇಕೆ ಸಿನಮಕ್ಕೊಂದು ಹಾಡು ಬರೆಯಲು ಪ್ರಯತ್ನಿಸಬಾರದು ?
ಈ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದಂತಹ ಕವನ - ಹೀಗೇಕೆ?
ಹೀಗೆ ಬರಿತಾ ಇರು.. ನಾನು ಓದ್ತಾ ಇರ್ತೀನಿ :)
ತ್ಯಾಗಮಯಿ , super kano.
ಪ್ರತ್ಯುತ್ತರಅಳಿಸಿnanage ista vaayithu.
continue ur writing , i will read.
ತುಂಬ ಇಷ್ಟವಾಯಿತು ನಿಮ್ಮ ಕವನಗಳು.ಹೀಗೆ ಮುಂದುವರಿಸಿ.
ಪ್ರತ್ಯುತ್ತರಅಳಿಸಿ